ಮತದಾನದ ಹಬ್ಬ ಸಂಭ್ರಮಿಸಿದ ಮೊದಲ ಮತದಾರರು

L.T.Ekanth
Published on

ಚಿತ್ರದುರ್ಗ: ಲೋಕಸಭಾ ಚುನಾವಣೆ ಅಂಗವಾಗಿ ಕ್ಷೇತ್ರದಲ್ಲಿ ಶುಕ್ರವಾರ ಜರುಗಿದ ಮತದಾನ ಹಬ್ಬದಲ್ಲಿ ಮೊದಲ ಬಾರಿ ತಮ್ಮ ಹಕ್ಕು ಚಲಾಯಿಸಿದ ಯುವಸಮೂಹ ಸಂಭ್ರಮಿಸಿದರು.

ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಕುರುಡಿಹಳ್ಳಿ ಗ್ರಾಮದ ಎಚ್.ಅನುಷಾ, ಅಂಚೆ ಮೂಲಕ ತಲುಪಿದ ಮತದಾರರ ಗುರುತಿನ ಚೀಟಿಯನ್ನು ಮತಗಟ್ಟೆ ಎದುರೇ ತೆರದು ಸಂಭ್ರಮಿಸಿದಳು.

ಚಳ್ಳಕೆರೆ ಗಾಂಧಿನಗರ ನಿವಾಸಿ ಮಹಾಲಕ್ಷ್ಮಿ ಸರ್ಕಾರಿ ಪಿಯು ಕಾಲೇಜಿನಲ್ಲಿ ಮತ ಚಲಾಯಿಸಿದಳು. ನಂತರ ಮಾತನಾಡಿ, ಮತದಾನ ಪ್ರಕ್ರಿಯೆಯ ಕುರಿತು ತುಂಬಾ ಕುತೂಹಲವಿತ್ತು. ದೇಶದ ಪ್ರಜಾಪ್ರಭುತ್ವ ಇನ್ನಷ್ಟು ಸದೃಢಗೊಳಿಸಲು, ನ್ಯಾಯ ಸಮ್ಮತವಾಗಿ ಯಾವುದೇ ರೀತಿಯ ಭಯ-ಭೀತಿ ಇಲ್ಲದೆ, ದೇಶದ ಹಿತಕ್ಕಾಗಿ ನನ್ನ ಹಕ್ಕು ಚಲಾಯಿಸಿದ್ದೇನೆ. ಮುಂದೆಯೂ ಪ್ರತಿ ಚುನಾವಣೆಯಲ್ಲೂ ತಪ್ಪದೇ ಮತದಾನ ಮಾಡುವುದಾಗಿ ತಿಳಿಸಿದರು.

ಮತದಾನ ಎಂಬುದು ಪವಿತ್ರ ಕಾರ್ಯ. ಇದರಲ್ಲಿ ಅರ್ಹರೆಲ್ಲರೂ ಭಾಗಿಯಾಗಬೇಕು. ಅದಕ್ಕಾಗಿ ತುಮಕೂರಿನಿಂದ ಬಂದಿದ್ದೇನೆ. ಆಮಿಷಕ್ಕೆ ಒಳಗಾಗಬಾರದು. ಪ್ರಜಾಪ್ರಭುತ್ವ ಬಲವರ್ಧನೆಗಾಗಿ, ದೇಶದ ಅಭಿವೃದ್ಧಿ ದೃಷ್ಟಿಯಿಂದ ಉತ್ತಮರ ಆಯ್ಕೆ ಮಾಡುವ ಜವಾಬ್ದಾರಿ ಅರಿತು ಮತ ಚಲಾಯಿಸಿದ್ದೇನೆ ಎಂದು ಚಿತ್ರದುರ್ಗ ಪಿ.ಎಸ್.ಭೂಮಿಕಾ ತಿಳಿಸಿದರು.

ದಾನಗಳಲ್ಲಿ ಮತದಾನ ಕೂಡ ಅತ್ಯಂತ ಪವಿತ್ರವಾದುದು. ಇದು ಪ್ರಜಾಪ್ರಭುತ್ವ ಹಾಗೂ ಸದೃಢ ದೇಶ ನಿರ್ಮಾಣಕ್ಕೂ ಸಹಕಾರಿಯಾಗಲಿದೆ. ಅರ್ಹ ಯುವ ಮತದಾರರು ಮುಂಬರುವ ಚುನಾವಣೆಗಳಲ್ಲೂ ತಪ್ಪದೆ, ಹಕ್ಕು ಚಲಾಯಿಸಿದ್ದೇನೆ ಎನ್ನುತ್ತಾರೆ ಚಿತ್ರದುರ್ಗದ ಎಲ್.ಟಿ.ಏಕಾಂತ್.

ಮೊದಲ ಬಾರಿ ಮತ ಚಲಾಯಿಸಿದ್ದು, ಸಂತಸ ತಂದಿದೆ. ದೇಶದ ಉತ್ತಮ ಭವಿಷ್ಯಕ್ಕಾಗಿ ಸಂವಿಧಾನ ನೀಡಿರುವ ಹಕ್ಕನ್ನು ಸದ್ಬಳಕೆ ಮಾಡಿಕೊಂಡಿರುವ ಸಂತೋಷವಿದೆ. ಮತದಾನ ಎಂಬುದು ದೊಡ್ಡ ಹಬ್ಬವಾಗಿದ್ದು, ಪಾಲ್ಗೊಳ್ಳುವುದು ಪ್ರಜೆಗಳ ಕರ್ತವ್ಯವಾಗಿದೆ ಎಂದು ಚಿತ್ರದುರ್ಗದ ಜಿ.ಕೋಮಲಾ ತಿಳಿಸಿದರು.

ಮೊದಲ ಬಾರಿ ಮತದಾನ ಮಾಡುತ್ತಿದ್ದೇನೆಂಬ ಖುಷಿ ಇದೆ. ಇದರ ಮಹತ್ವದ ಕುರಿತು ಕಾಲೇಜಿನಲ್ಲಿ ಅರಿವು ಮೂಡಿಸಿದ್ದಾರೆ. ದೇಶದ ಪ್ರಜಾತಂತ್ರ ಹಬ್ಬದಲ್ಲಿ ಭಾಗಿಯಾಗಿರುವುದು ಸಂತಸ ತಂದಿದೆ ಎನ್ನುತ್ತಾರೆ ಚಳ್ಳಕೆರೆಯ ಎಚ್.ಅನುಷಾ.

ಮತದಾನ ಹಬ್ಬದಲ್ಲಿ ಪಾಲ್ಗೊಂಡು ಸಂಭ್ರಮಿಸಿದ್ದೇನೆ. ಸಂವಿಧಾನ ನೀಡಿರುವ ಹಕ್ಕನ್ನು ಬಳಸಿಕೊಂಡು ಸೂಕ್ತರನ್ನು ಆಯ್ಕೆ ಮಾಡಬೇಕು. ಈ ಮೂಲಕ ದೇಶ ವಿಶ್ವ ಮಟ್ಟದಲ್ಲಿ ಖ್ಯಾತಿ ಗಳಿಸಿ, ಅಭಿವೃದ್ಧಿ ಹೊಂದಲು ನಾವುಗಳು ಪಾಲುದಾರರಾಗಲಿದ್ದೇವೆ ಎಂದು ಚಿತ್ರದುರ್ಗದ ಮೋಹನ್ ಎಂ ಕೋಟೆ ತಿಳಿಸಿದರು.

ಮತದಾನ ದೇಶದ ಸುಂದರ ಭವಿಷ್ಯಕ್ಕಾಗಿ, ಉತ್ತಮರ ಆಯ್ಕೆಗಾಗಿ ಸಂವಿಧಾನ ನೀಡಿರುವ ಅವಕಾಶವಾಗಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳುವ ಹೊಣೆಗಾರಿಕೆ ಮತದಾರರದ್ದಾಗಿದೆ ಎನ್ನುತ್ತಾರೆ ಹೊಳಲ್ಕೆರೆಯ ಎಸ್. ದಗ್ಗೆ ಚಂದ್ರಮೌಳಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net