ಮತದಾನದ ಹಕ್ಕು ಕಸಿಯಲು ಹುನ್ನಾರ

TKE congres
ತರೀಕೆರೆ ಖಾಸಗಿ ಬಸ್ ನಿಲ್ದಾಣ ಸಮೀಪ ಸಹಿ ಸಂಗ್ರಹ ಅಭಿಯಾನಕ್ಕೆ ಶಾಸಕ ಜಿ.ಎಚ್.ಶ್ರೀನಿವಾಸ್ ಚಾಲನೆ ನೀಡಿದರು. ಡಾ. ಕೆ.ಪಿ.ಅಂಶುಮಂತ್, ವಸಂತ್‌ಕುಮಾರ್, ಎಚ್.ಯು.ಾರೂಕ್, ಟಿ.ಎಸ್.ಪ್ರಕಾಶ್ ವರ್ಮ ಇತರರಿದ್ದರು.
Published on

ತರೀಕೆರೆ: ದೇಶದ ನಾಗರಿಕರಿಗೆ ಸಂವಿಧಾನ ನೀಡಿದ ಮತದಾನದ ಹಕ್ಕನ್ನು ಬಿಜೆಪಿ ಕಿತ್ತುಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಆರೋಪಿಸಿದರು.

ಪಟ್ಟಣದ ಖಾಸಗಿ ಬಸ್ ನಿಲ್ದಾಣ ಸಮೀಪ ಬ್ಲಾಕ್ ಕಾಂಗ್ರೆಸ್ ಶನಿವಾರ ಬಿಜೆಪಿ ಮತ ಕಳವು ಮಾಡುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಬಿಜೆಪಿ ನಾಯಕರು ವಾಮಮಾರ್ಗದ ಮೂಲಕ ಅಧಿಕಾರ ಹಿಡಿಯಲು ಚುನಾವಣಾ ಆಯೋಗವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಇವಿಎಂ ಮೂಲಕ ಮತಕಳವು ಮಾಡಿ ಪ್ರಜಾತಂತ್ರ ವ್ಯವಸ್ಥೆ ನಾಶಗೊಳಿಸುತ್ತಿದೆ. ಬಿಹಾರದಲ್ಲಿ ಚುನಾವಣೆ ಪೂರ್ವದಲ್ಲೇ ಮತಕ್ಕೆ ಲಂಚ ನೀಡಿರುವ ಬಿಜೆಪಿ ಅಸ್ಸಾಂನಲ್ಲಿ ಬಿಜೆಪಿ ಪರವಲ್ಲದ ಸುಮಾರು 40 ಲಕ್ಷ ಮತದಾರರ ಹೆಸರನ್ನು ಡಿಲೀಟ್ ಮಾಡಿಸಿದೆ ಎಂದು ದೂರಿದರು.

ರಸಗೊಬ್ಬರಗಳ ಬೆಲೆ ಅಧಿಕ ಮಾಡಿರುವ ಜತೆಗೆ ಯೂರಿಯಾ ಮತ್ತು ಪೊಟ್ಯಾಷ್ ಗೊಬ್ಬರ ಪೂರೈಕೆ ಮಾಡದೆ ರೈತರಿಗೆ ಅನ್ಯಾಯ ಮಾಡಿದೆ. ಬಿಜೆಪಿ ನಾಯಕರು ಧರ್ಮಗಳ ನಡುವೆ ಸಂಘರ್ಷ ಮೂಡಿಸಿ ಪರಸ್ಪರರ ನಡುವಿನ ಸಾಮರಸ್ಯ ಒಡೆದು ಹಾಕುತ್ತಿದ್ದಾರೆ ಎಂದು ಆಪಾದಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಕೆ.ಪಿ.ಅಂಶುಮಂತ್ ಮಾತನಾಡಿ, 11 ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತಾ ಷಾ ನೇತೃತ್ವದ ಕೇಂದ್ರ ಸರ್ಕಾರ ನೋಟ್‌ಬ್ಯಾನ್, ಜಿಎಸ್‌ಟಿಗಳಂಥ ಅವೈಜ್ಞಾನಿಕ ಕಾನೂನು ಜಾರಿಗೊಳಿಸಿ ರೈತವಿರೋಧಿ ನೀತಿ ಅನುಸರಿಸಿದೆ. ಬಿಜೆಪಿ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳನ್ನು ಕಳವು ಮಾಡಿ ಅಧಿಕಾರ ಹಿಡಿದಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಕಗ್ಗೊಲೆ ಮಾಡಲು ಹೊರಟಿರುವ ಬಿಜೆಪಿ ದುರಾಡಳಿತ, ದುರ್ನೀತಿಯನ್ನು ಕಾರ್ಯಕರ್ತರು ಮತದಾರರಿಗೆ ತಿಳಿಸುವ ಕೆಲಸ ಮಾಡಬೇಕು ಎಂದರು.

ಪುರಸಭೆ ಅಧ್ಯಕ್ಷ ವಸಂತ್‌ಕುಮಾರ್, ಸದಸ್ಯರಾದ ಎಂ.ಗಿರಿಜಾ, ಟಿ.ಎಂ.ರಂಗನಾಥ್, ಪರಮೇಶ್, ತರೀಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಯು.ಾರೂಕ್, ಅಜ್ಜಂಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ದಯಾನಂದ್, ಜಿಪಂ ಮಾಜಿ ಸದಸ್ಯ ಎಚ್.ವಿಶ್ವನಾಥ್, ಕಾಂಗ್ರೆಸ್ ನಗರ ಘಟಕ ಅಧ್ಯಕ್ಷ ಟಿ.ಎಸ್.ಪ್ರಕಾಶ್ ವರ್ಮ, ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಟಿ.ಎನ್.ಜಗದೀಶ್, ಪುರಸಭೆ ಮಾಜಿ ಅಧ್ಯಕ್ಷರಾದ ಟಿ.ಎಸ್.ಧರ್ಮರಾಜ್, ಪ್ರಮುಖರಾದ ಎಲ್.ಟಿ.ಹೇಮಣ್ಣ, ವಿಜಯಬಾಯಿ, ಪುಷ್ಪಲತಾ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net