

ಚಿತ್ರದುರ್ಗ: ಜಾತಿ-ಧರ್ಮ, ಅಂತಸ್ತಿನ ಭೇದವಿಲ್ಲದೆ, ದೇಶದ ಸರ್ವರಿಗೂ ಸಂವಿಧಾನದ ಮೂಲಕ ಮತದಾನದ ಹಕ್ಕು ಕಲ್ಪಿಸಿದ ಮಹಾತ್ಮ ಡಾ.ಬಿ.ಆರ್.ಅಂಬೇಡ್ಕರ್ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಬಣ್ಣಿಸಿದರು.
ಜಿಪಂ ಸಭಾಂಗಣದಲ್ಲಿ ಭಾನುವಾರ ನಡೆದ ಅಂಬೇಡ್ಕರ್ ಜಯಂತಿಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ನಂತರ ಮಾತನಾಡಿದರು.
ಅಂಬೇಡ್ಕರ್ ಜ್ಞಾನದ ದೀವಿಗೆ. ಅವರಿಂದ ಬಹಳಷ್ಟು ಜನರ ಜೀವನ ಬೆಳಕು ಕಂಡಿದೆ. ಅವರು ನೀಡಿದ ಮತದಾನದ ಮಹತ್ವ ಅರಿತು ಏ. 26ರಂದು ಅರ್ಹರೆಲ್ಲರೂ ತಪ್ಪದೇ ಹಕ್ಕು ಚಲಾಯಿಸಿ. ಈ ಕಾರ್ಯಕ್ಕೆ ಸುತ್ತಮುತ್ತಲಿನ ಜನರನ್ನು ಪ್ರೇರೇಪಿಸಿ. ಪ್ರಜಾಪ್ರಭುತ್ವದ ಬೇರು ಗಟ್ಟಿಗೊಳಿಸಿ. ಜವಾಬ್ದಾರಿಯುತ ಸರ್ಕಾರ ಆಯ್ಕೆ ಮಾಡಿ ಎಂದು ಮನವಿ ಮಾಡಿದರು.
ಉಪನ್ಯಾಸಕ ಡಾ.ಬಿ.ಎಂ.ಗುರುನಾಥ್ ಮಾತನಾಡಿ, ಬಡವರ ಭಾಗ್ಯವಿಧಾತ ಅಂಬೇಡ್ಕರ್. ಇಂದಿಗೂ ಅನೇಕ ಸಮುದಾಯಗಳು ಜಾತಿ ವ್ಯವಸ್ಥೆಯ ಬೇಗುದಿಯಲ್ಲಿ ಬೆಂದು ನಿಟ್ಟುಸಿರು ಬಿಡುತ್ತಿವೆ. ಆದರೆ, ಅವರ ನಂತರ ದೀನ ದಲಿತರ ಕುರಿತು ಕಾಳಜಿವಹಿಸುವ ನಾಯಕ ದೇಶದಲ್ಲೇ ಜನಿಸಿಲ್ಲ ಎಂದರು.
ಅಂಬೇಡ್ಕರ್ ಮೇಲು-ಕೀಳೆಂಬ ಜಾತಿಯತೆಯ ರಕ್ಕಸತ್ವ ನಿವಾರಣೆಗೆ ಪ್ರಯತ್ನಿಸಿದರು. ದಲಿತರ ಹಕ್ಕುಗಳಿಗಾಗಿ ಸತತ ಹೋರಾಟ ನಡೆಸಿದರು. ಅಮೂಲ್ಯ ಮತದ ಮೂಲಕ ಆಯ್ಕೆ ಮಾಡುವ ನಾಯಕ ಹೇಗಿರಬೇಕು ಎಂಬ ಕಲ್ಪನೆ ನೀಡಿದ ಮಹಾತ್ಮ ಎಂದು ಹೇಳಿದರು.
ಮುಂದಿನ ವರ್ಷ ಅದ್ದೂರಿ ಆಚರಣೆ: ಲೋಕಸಭಾ ಚುನಾವಣೆ ನೀತಿ ಸಂಹಿತೆ ಕಾರಣಕ್ಕೆ ಅಂಬೇಡ್ಕರ್ ಜಯಂತಿ ಈ ಬಾರಿ ಅತ್ಯಂತ ಸರಳವಾಗಿ ಆಚರಿಸಿದ್ದೇವೆ. ಆದರೆ, ಮುಂದಿನ ವರ್ಷ ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಭರವಸೆ ನೀಡಿದರು.
ಎಸ್‌ಪಿ ಧರ್ಮೇಂದರ್‌ಕುಮಾರ್ ಮೀನಾ, ಜಿಪಂ ಉಪ ಕಾರ್ಯದರ್ಶಿ ತಿಮ್ಮಪ್ಪ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಹೆಬ್ಬಳ್ಳಿ, ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ, ಆಹಾರ ಇಲಾಖೆ ಜಂಟಿ ನಿರ್ದೇಶಕ ಮಧುಸೂಧನ್, ನಗರಸಭೆ ಪೌರಾಯುಕ್ತೆ ಎಂ.ರೇಣುಕಾ, ಜಿಪಂ ಯೋಜನಾ ನಿರ್ದೇಶಕ ಸತೀಶ್‌ರೆಡ್ಡಿ ಇತರರಿದ್ದರು.