

ಆಲೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರೇ ಪ್ರಭುಗಳು. ಅವರು ಚಲಾಯಿಸುವ ಪ್ರತಿಯೊಂದು ಮತಕ್ಕೂ ಅದರದೇ ಆದ ಮೌಲ್ಯವಿದ್ದು, 18 ವರ್ಷ ದಾಟಿದ ಎಲ್ಲರೂ ತಪ್ಪದೆ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಬೇಕು ಎಂದು ತಹಸೀಲ್ದಾರ್ ಕೆ.ಸಿ ಸೌಮ್ಯ ತಿಳಿಸಿದರು.
ಆಲೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲೂಕು ಆಡಳಿತ, ಸ್ವೀಪ್ ಸಮಿತಿ ಆಲೂರು, ಐಕ್ಯೂಎಸಿ ಕನ್ನಡ ವಿಭಾಗ ಹಾಗೂ ಚುನಾವಣಾ ಸಾಕ್ಷರತಾ ಸಂಘದಿಂದ ಆಯೋಜಿಸಿದ್ದ ಅಸ್ಪಶ್ಯತೆ ನಿರ್ಮೂಲನೆ ಮತ್ತು ಮತದಾನ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಭವಿಷ್ಯದ ರಾಷ್ಟ್ರ ನಿರ್ಮಾಣಕ್ಕೆ ಒಂದು ಮತವೂ ಕೂಡ ಅತ್ಯಮೂಲ್ಯ. ಪ್ರತಿಯೊಬ್ಬರು ಮತದಾನ ಮಾಡಿ ದೇಶ ಅಭಿವೃದ್ಧಿಗೆ ಕಾರಣರಾಗಬೇಕು. ಮತದಾನ ಪ್ರತಿಯೊಬ್ಬರ ಹಕ್ಕು ಎಲ್ಲರೂ ಮತದಾನದ ಮೂಲಕ ಉತ್ತಮ ಪ್ರತಿನಿಧಿಗಳನ್ನು ಸಮಾಜಕ್ಕೆ ಕೊಡುವಂತಹ ಕೆಲಸ ಮಾಡಬೇಕಿದೆ. ಹಾಗಾಗಿ 18 ವರ್ಷ ಮೇಲ್ಪಟ್ಟ ವಯಸ್ಕರು ಕಡ್ಡಾಯವಾಗಿ ಮತದಾನ ಗುರುತಿನ ಚೀಟಿ ಮಾಡಿಸುವಂತೆ ಮನವಿ ಮಾಡಿದರು.
ತಾ.ಪಂ.ಕಾರ್ಯನಿರ್ವಾಹಣಾಧಿಕಾರಿ ನಾರಾಯಣಸ್ವಾಮಿ ಮಾತನಾಡಿ, ಮತದಾರರು ಪ್ರಜಾಪ್ರಭುತ್ವದ ಅವಿಭಾಜ್ಯ ಅಂಗ. ಮತದಾರರಲ್ಲಿ ಜಾಗೃತಿ ಮೂಡಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಪ್ರತಿ ಮತದಾರನೂ ಸಹ ಮತದಾನದಿಂದ ಹೊರಗೆ ಉಳಿಯಬಾರದು ಹಾಗೂ ನೂರಕ್ಕೆ ನೂರರಷ್ಟು ಮತದಾನ ಆಗಬೇಕು ಎಂಬುದು ಚುನಾವಣಾ ಆಯೋಗದ ಗುರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಪ್ರೊ.ಡಿ.ಕೆ ಮಂಜಯ್ಯ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಚ್.ಪಿ.ಲಿಂಗರಾಜ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ಶೋಭಾ, ಕಾಲೇಜಿನ ಪ್ರಾಧ್ಯಾಪಕರುಗಳಾದ ಶಿವಪ್ರಸಾದ್ ಎಚ್.ಜಿ.ಪುರುಷೋತ್ತಮ್, ಮನು, ತೇಜಸ್ ಕುಮಾರ್, ಕಾಂತರಾಜು, ಸ್ವೀಪ್ ಸಮಿತಿ ಸದಸ್ಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.