

ಚಿತ್ರದುರ್ಗ: ಸರ್ಕಾರಿ ರಜಾ ದಿನಗಳಾದ ಶನಿವಾರ ಮತ್ತು ಭಾನುವಾರವನ್ನು ಸದ್ಬಳಕೆ ಮಾಡಿಕೊಂಡು ಮತದಾನ ಜಾಗೃತಿ ಮೂಡಿಸಲು ಅಮೃತಾಪುರ ಬೂತ್ ಮಟ್ಟದ ಅಧಿಕಾರಿ ಟಿ.ಪಿ.ಉಮೇಶ್ ಮುಂದಾಗಿದ್ದಾರೆ.
18 ವರ್ಷ ತುಂಬಿದ ಅರ್ಹರೆಲ್ಲರೂ ಮೊದಲು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಿ. ಭಾರತ ಚುನಾವಣಾ ಆಯೋಗದಿಂದ ಮತದಾರರ ಗುರುತಿನ ಚೀಟಿ ಪಡೆಯಿರಿ. ಕಾಲಕಾಲಕ್ಕೆ ನಡೆಯುವ ಚುನಾವಣೆಯಲ್ಲಿ ತಪ್ಪದೆ, ಮತ ಚಲಾಯಿಸಿ ಎಂಬ ಅರಿವು ಮೂಡಿಸುವಲ್ಲಿ ನಿರತರಾಗಿದ್ದಾರೆ.
ಹೊಳಲ್ಕೆರೆ ತಾಲೂಕಿನ ಅಮೃತಾಪುರ, ಗೌರೀಪುರದಲ್ಲಿ ಮತಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯದಲ್ಲಿ ತೊಡಗಿರುವ ಅವರು ಗ್ರಾಮಸ್ಥರಲ್ಲಿ ಮತದಾನದ ಮಹತ್ವ ತಿಳಿಸಿದರು.
ಚುನಾವಣಾ ಆಯೋಗ, ಜಿಲ್ಲಾಧಿಕಾರಿ, ಹೊಳಲ್ಕೆರೆ ತಹಸೀಲ್ದಾರರ ಆದೇಶದನ್ವಯ ಅರ್ಹರಿಗೆ, ಮದುವೆಯಾಗಿ ಗ್ರಾಮಕ್ಕೆ ಬಂದಿರುವವರ ದಾಖಲೆ ಪಡೆದು ಮತಪಟ್ಟಿಗೆ ಆನ್‌ಲೈನ್‌ನಲ್ಲಿ ಅರ್ಜಿ ಹಾಕುವುದು, ಮೃತಪಟ್ಟವರ, ಶಾಶ್ವತ ಸ್ಥಳಾಂತರ ಹೊಂದಿದ ಮತದಾರರನ್ನು ಮತಪಟ್ಟಿಯಿಂದ ತೆಗೆದುಹಾಕುವ, ತಿದ್ದುಪಡಿ ಇದ್ದಲ್ಲಿ ಸರಿಪಡಿಸಿಕೊಳ್ಳಲು ಮಾರ್ಗದರ್ಶನ ನೀಡುತ್ತಿದ್ದಾರೆ.
ಆಯೋಗ ವರ್ಷಪೂರ್ತಿ ಮತಪಟ್ಟಿಗೆ ನೋಂದಾಯಿಸಲು ಅರ್ಹರಿಗೆ ಅವಕಾಶ ನೀಡಿದೆ. ವಿಶೇಷ ಪರಿಷ್ಕರಣೆ ದಿನಗಳನ್ನು ನಿಗದಿಗೊಳಿಸಿ ದಾಖಲಾತಿಗೆ ಕ್ರಮವಹಿಸಿದೆ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಬಲಗೊಳಿಸಲು ಈ ಸದಾವಕಾಶ ಸದ್ಬಳಕೆಗೆ ಮುಂದಾಗಬೇಕು ಎಂದು ಮನವಿ ಮಾಡಿದ್ದಾರೆ.
ಪರಿಷ್ಕರಣೆ ವೇಳೆ ಅಮೃತಾಪುರದಲ್ಲಿ ಐವರು ಮೃತಪಟ್ಟಿದ್ದು, ಮತಪಟ್ಟಿಯಿಂದ ತೆಗೆಸಲಾಗಿದ್ದು, ಇಬ್ಬರ ದಾಖಲೆ ತಿದ್ದುಪಡಿ ಹಾಗೂ ಹೊಸ ನೋಂದಣಿಗೆ ಪ್ರಯತ್ನಿಸಲಾಯಿತು ಎಂದು ತಿಳಿಸಿದ್ದಾರೆ.