

ದೊಡ್ಡಬಳ್ಳಾಪುರ: ಸೆ.3ರಂದು ನಡೆಯುವ ದೊಡ್ಡಬಳ್ಳಾಪುರ ನಗರಸಭೆ ಚುನಾವಣೆಯಲ್ಲಿ 2018ರ ಮತದಾರರ ಪಟ್ಟಿಯಂತೆ ಮತದಾನಕ್ಕೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಮತದಾರರ ಪಟ್ಟಿಯಿಂದ ಹೊರಗುಳಿದ 11ನೇ ವಾರ್ಡಿನ ನಿವಾಸಿಗಳು ಕರೇನಹಳ್ಳಿ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಭಾನುವಾರ ಪಟ್ಟಣದ ಕರೇನಹಳ್ಳಿ ಗಣೇಶ ದೇವಸ್ಥಾನದ ಬಳಿ ಪ್ರತಿಭಟನೆ ನಡೆಸಿದರು.
ಕರೇನಹಳ್ಳಿ ವಾರ್ಡಿನಲ್ಲಿ ಈ ಹಿಂದೆ ಕೆಲ ಕಳ್ಳ ಮತಗಳು ಇದ್ದವು. ಅವನ್ನು ತೆಗೆಯುವಂತೆ ನಗರಸಭೆಗೆ ಮನವಿ ಮಾಡಲಾಗಿತ್ತು. ಆದರೆ ಅಧಿಕಾರಿಗಳು 1,554 ನೈಜ ಮತದಾರರನ್ನು ಉದ್ದೇಶಪೂರ್ವಕವಾಗಿ ಕೈಬಿಟ್ಟಿದ್ದಾರೆ ಎಂದು ಸಮಿತಿ ಮುಖಂಡ ಡಿ.ಆರ್.ಧ್ರುವಕುಮಾರ್ ದೂರಿದರು.
ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಹಿನ್ನೆಲೆಯಲ್ಲಿ 2018ರ ಮತದಾರರ ಪಟ್ಟಿಯಂತೆ ಚುನಾವಣೆ ನಡೆಸಬೇಕು ಎಂದು ಆ.4ರಂದು ಕೋರ್ಟ್ ಆದೇಶ ನೀಡಿದೆ. ಆದರೂ ಜಿಲ್ಲಾಧಿಕಾರಿ, ತಹಸೀಲ್ದಾರ್ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ನಾಲ್ಕು ವಾರಗಳಲ್ಲಿ ಮತದಾರ ಪಟ್ಟಿಗೆ ಸೇರಿಸುವ ಪ್ರಕ್ರಿಯೆ ಮುಗಿಸಿ ಎಂದು ನ್ಯಾಯಾಲಯ ಹೇಳಿದೆ. ಆದರೆ ಆ.4 ರಿಂದ ಆದೇಶ ಕಡೆಗಣಿಸಿದ ಅಧಿಕಾರಿಗಳು, ಈಗ ಸಮಯ ಇಲ್ಲ ಎನ್ನುವ ಮೂಲಕ ನಮ್ಮ ಸಾಂವಿಧಾನಿಕ ಹಕ್ಕನ್ನು ಕಸಿದು ಕರ್ತವ್ಯ ಲೋಪ ಎಸಗಿದ್ದಾರೆ ಎಂದು ದೂರಿದರು.
ಮತದಾರರ ಪಟ್ಟಿಗೆ 1,554 ಮಂದಿಯ ಹೆಸರನ್ನು ಸೇರಿಸಿ. ಸಮಯ ಇಲ್ಲವಾದರೆ ಕರೇನಹಳ್ಳಿ ವಾರ್ಡ್ ಚುನಾವಣೆ ಸ್ಥಗಿತಗೊಳಿಸಿ, ಮತದಾರ ಪಟ್ಟಿಗೆ ಸೇರಿಸಿದ ನಂತರವೇ ಚುನಾವಣೆ ನಡಿಸಿ ಎಂದು ಒತ್ತಾಯಿಸಿದರು.
ಸಮಿತಿ ಮುಖಂಡ ಪಿ.ಎ.ವೆಂಕಟೇಶ್ ಮಾತನಾಡಿ, ನಗರದ ಗಡಿ ಭಾಗದ ಹೊರಗೆ ಇರುವ ಸುಮಾರು 350 ಮತದಾರರಿಗೆ ಹಕ್ಕುಚಲಾಯಿಸಲು ಅವಕಾಶ ನೀಡಲಾಗಿದೆ. ಆದರೆ ಗಡಿ ಒಳಗೆ ಇರುವ 1,554 ಮತಗಳನ್ನು ತೆಗೆದಿರುವುದು ಉದ್ದೇಶಪೂರ್ವಕ ಎಂದು ದೂರಿದರು.
ನಮಗೆ ಮತದಾನದ ಹಕ್ಕು ನೀಡುವಂತೆ ಒತ್ತಾಯಿಸಿ ಆ.29ರಂದ ಬೆಳಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ 1000 ಸಂಖ್ಯೆಗೂ ಹೆಚ್ಚು ಮಂದಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿದ್ದೇವೆ ಎಂದರು.
ಒಂದೇ ಮನೆಯಲ್ಲಿ ಇರುವ ಕೆಲವರಿಗೆ ಮತದಾನಕ್ಕೆ ಅವಕಾಶ ನೀಡಲಾಗಿದೆ. ಮತ್ತೆ ಕೆಲವರನ್ನು ಕೈಬಿಡಲಾಗಿದೆ. ಇದು ಅಧಿಕಾರಿಗಳ ಬೇಜವಾಬ್ದಾರಿಗೆ ಸಾಕ್ಷಿ ಎಂದು ವಾರ್ಡಿನ ನಿವಾಸಿ ಗೌರಮ್ಮ ಬೇಸರ ವ್ಯಕ್ತಪಡಿಸಿದರು.
ಸಮುತಿ ಮುಖಂಡರಾದ ಕಮಲೂರು ಶ್ರೀನಿವಾಸ್, ಡಾ.ರಾಜಕುಮಾರ ಅಭಿಮಾನಿಗಳ ಸಂಘದ ಅಧ್ಯಕ್ಷ ಸು.ನರಸಿಂಹಮೂರ್ತಿ ಇತರರು ಇದ್ದರು.