ಮತದಾನ ಹೆಚ್ಚಳಕ್ಕೆ ಕ್ರಮವಹಿಸಿ : ತಾಪಂ ಇಒ ಲೋಕೇಶ್‌ಮೂರ್ತಿ ಸೂಚನೆ

29mlk1
Published on


ಮಂಡ್ಯ : ಮೇಲುಕೋಟೆಯಲ್ಲಿ ಮತದಾನದ ಪ್ರಮಾಣ ಕಡಿಮೆಯಿದ್ದು, ಹೆಚ್ಚು ಜನರು ಮತ ಕೇಂದ್ರಕ್ಕೆ ಬಂದು ಮತ ಹಾಕುವಂತೆ ಜಾಗೃತಿ ಮೂಡಿಸಬೇಕು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಲೋಕೇಶ್‌ಮೂರ್ತಿ ಸೂಚಿಸಿದರು.


ಮೇಲುಕೋಟೆಯಲ್ಲಿ ಗ್ರಾಪಂ ವತಿಯಿಂದ ಹಮ್ಮಿಕೊಂಡಿದ್ದ ಸ್ವೀಪ್ ಚಟುವಟಿಕೆಯ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಮಾತನಾಡಿದರು.


ಮೇ 10ರಂದು ನಡೆಯುವ ವಿದಾನಸಭಾ ಚುನಾವಣೆಯಲ್ಲಿ ಮತದಾರರು ತಪ್ಪದೇ ಮತಗಟ್ಟೆಗೆ ಬಂದು ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವದ ಘನತೆಯನ್ನು ಎತ್ತಿ ಹಿಡಿಯಬೇಕು. ಇನ್ನೆರಡು ದಿನಗಳಲ್ಲಿ ಬಿಎಲ್‌ಒಗಳು ವೋಟರ್ ಸ್ಲಿಪ್‌ಗಳನ್ನು ವಿತರಿಸಲಿದ್ದಾರೆ. ಮತದಾನಕ್ಕೆ ಪೂರಕವಾದ ಎಲ್ಲ ವ್ಯವಸ್ಥೆ ಮಾಡಲಾಗುವುದು ಎಂದರು.


ವಾಹನೋತ್ಸವ ಮಂಟಪದ ಮುಂಭಾಗ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜೇಶ್ವರ್ ಮತದಾನದ ಪ್ರತಿಜ್ಞಾವಿಧಿ ಬೋಧಿಸಿದರು. ದೇವಾಲಯದಿಂದ ಗ್ರಾಪಂ ಕಚೇರಿವರೆಗೆ ಮತದಾನ ಜಾಗೃತಿ ಜಾಥಾ ನಡೆಸಲಾಯಿತು. ರಂಗೋಲಿ ಸ್ಪರ್ಧೆಯಲ್ಲಿ ಕವಿತಾ(ಪ್ರಥಮ), ಪಲ್ಲವಿ(ದ್ವಿತೀಯ), ನಾಗರತ್ನ(ತೃತೀಯ) ಬಹುಮಾನ ಪಡೆದರು.


ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಎಸ್.ಮಹೇಶ್, ನರೇಗಾ ಸಹಾಯಕ ನಿರ್ದೇಶಕ ಸುರೇಂದ್ರ, ಎನ್.ಆರ್.ಎಲ್.ಎಂ ನರಸಿಂಹ, ಮೇಲುಕೋಟೆ ಬಾಲಕರ ಶಾಲೆಯ ಮುಖ್ಯಶಿಕ್ಷಕ ಎಸ್.ಎನ್.ಸಂತಾನರಾಮನ್, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತೆಯರು, ಸ್ತ್ರೀ ಶಕ್ತಿ ಸ್ವಸಹಾಯ ಸಂಘದ ಸದಸ್ಯೆಯರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net