

ಬೇಲೂರು: ತಾಲೂಕು ಆಡಳಿತ ಹಾಗೂ ಪುರಸಭೆ ವತಿಯಿಂದ ಮತದಾನ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದರ ಜತೆಗೆ ಶೇ.100 ರಷ್ಟು ಮತದಾನ ಮಾಡುವಂತೆ ಮನವಿ ಮಾಡಲಾಗುತ್ತಿದೆ ಎಂದು ಸಹಾಯಕ ಚುನಾವಣಾಧಿಕಾರಿ ಹಾಗೂ ತಹಸೀಲ್ದಾರ್ ಎಂ.ಮಮತಾ ಹೇಳಿದರು.
ಪುರಸಭೆಯಿಂದ ಶುಕ್ರವಾರ ಆಯೋಜಿಸಿದ್ದ ಮತದಾನ ಜಾಗೃತಿ ಬೈಕ್ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು. ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾನ ಮಾಡುವ ಮೂಲಕ ಹಬ್ಬದ ರೀತಿಯಲ್ಲಿ ಆಚರಿಸಲು ನಿಮ್ಮೆಲ್ಲರ ಸಹಕಾರ ಮುಖ್ಯ. ನಮಗೆ ಸಿಕ್ಕಿರುವ ಪ್ರಜಾಪ್ರಭುತ್ವದ ಹಬ್ಬದಲ್ಲಿ ಪ್ರತಿಯೊಬ್ಬರೂ ಪಾಲ್ಗೊಂಡು ಶೇ.100 ಮತದಾನ ಮಾಡುವುದಕ್ಕೆ ಮುಂದಾಗಬೇಕು. ಈ ನಿಟ್ಟಿನಲ್ಲಿ ತಾಲೂಕು ಆಡಳಿತದಿಂದ ಹಲವಾರು ಕಾರ್ಯಕ್ರಮಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಅದರಲ್ಲೂ ಬಹು ಮುಖ್ಯವಾಗಿ ಯುವ ಜನಾಂಗ ಮತದಾನದಿಂದ ದೂರ ಉಳಿಯದೆ ಮತಗಟ್ಟೆಗೆ ಬಂದು ಮತದಾನ ಮಾಡಬೇಕು ಎಂದು ಮನವಿ ಮಾಡಿದರು.
ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್ ಮಾತನಾಡಿ, ವಿಧಾನಸಭಾ ಚುನಾವಣೆ ಅಂಗವಾಗಿ ಚುನಾವಣಾ ಆಯೋಗದ ನಿರ್ದೇಶನದಂತೆ ಪಟ್ಟಣದ 23 ವಾರ್ಡ್‌ಗಳಲ್ಲಿ ಮತದಾನದ ಆಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಪ್ರತಿನಿತ್ಯ ಮತದಾರರನ್ನು ಕಡ್ಡಾಯವಾಗಿ ಮತದಾನ ಮಾಡುವಂತೆ ಮನವಿ ಮಾಡಲಾಗುತ್ತಿದೆ. ಈಗಾಗಲೇ ಮತದಾರರನ್ನು ಸೆಳೆಯುವ ಉದ್ದೇಶದಿಂದ ಯುವ ಮತದಾನ ಕೇಂದ್ರ, ಸಖಿ ಮತದಾನ ಕೇಂದ್ರ ತೆರೆಯುವ ಮೂಲಕ ಮತದಾರರನ್ನು ಆಕರ್ಷಿಸುತ್ತಿದ್ದೇವೆ. ಎಲ್ಲ ನಾಗರಿಕರೂ ಮತದಾನದಲ್ಲಿ ಪಾಲ್ಗೊಳ್ಳುವ ಮೂಲಕ ಪುರಸಭೆ ವ್ಯಾಪ್ತಿಯಲ್ಲಿ ಅತಿಹೆಚ್ಚು ಮತದಾನ ಮಾಡುವಂತೆ ಕೋರುತ್ತಿದ್ದೇವೆ ಎಂದರು.
ಪುರಸಭೆ ವ್ಯವಸ್ಥಾಪಕ ಪ್ರಶಾಂತ್, ಪರಿಸರ ಇಂಜಿನಿಯರ್ ಮಧುಸೂದನ್, ಕಂದಾಯಾಧಿಕಾರಿ ಪ್ರಸನ್ನ, ಆರೋಗ್ಯಾಧಿಕಾರಿ ಜ್ಯೋತಿ, ಲೋಹಿತ್, ಸಿಬ್ಬಂದಿ ಕುಮಾರ್, ಪ್ರತೀಕ್ಷಾ, ಪೃಥ್ವಿ, ಸಲ್ಮಾನ್ ಇತರರಿದ್ದರು.