ಮತದಾನ ಪ್ರಮಾಣ ಹೆಚ್ಚಿಸಲು ಕಸರತ್ತು

ctd beedi nataka---00003
Published on

ಚಿತ್ರದುರ್ಗ: ಲೋಕಸಭೆ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಳಕ್ಕಾಗಿ ಜಿಲ್ಲಾ ಕೇಂದ್ರ ಸೇರಿ ಜಿಲ್ಲೆ ವಿವಿಧೆಡೆ ಹಲವು ಕಾರ‌್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿರುವ ಜಿಲ್ಲಾ ಸ್ವೀಪ್ ಸಮಿತಿ ಈಗ ಸಹಿ ಅಭಿಯಾನಕ್ಕೆ ಮುಂದಾಗಿದೆ.
ಕಳೆದ ಚುನಾವಣೆಯಲ್ಲಿ ರಾಜ್ಯದ ಸರಾಸರಿ ಶೇ.68.81ಕ್ಕಿಂತ ಕಡಿಮೆ ಮತದಾನ ಪ್ರದೇಶಗಳನ್ನು ವಿಶೇಷವಾಗಿ ಗಮನದಲ್ಲಿ ಇಟ್ಟುಕೊಂಡು ವಾಕ್‌ಥಾನ್, ಬೈಕ್‌ರ‌್ಯಾಲಿ, ಅಂಗವಿಕಲರ ತ್ರಿಚಕ್ರ ಮೋಟಾರ್ ರ‌್ಯಾಲಿ, ರಂಗೋಲಿ ಸ್ಪರ್ಧೆ, ಬೀದಿನಾಟಕಗಳು, ಕ್ಯಾಂಡಲ್ ಲೈಟ್ ಮಾರ್ಚ್, ಹಿರಿಯ ನಾಗರಿಕರಲ್ಲಿ ಮತಜಾಗೃತಿ, ಮೇ ಭಾರತ್ ಹೋ (ಎಲ್‌ಇಡಿ), ಎಲ್ಲ ಪಿಯು, ಪದವಿ ಕಾಲೇಜುಗಳಲ್ಲಿ ಕಡ್ಡಾಯ ಮತದಾನದ ಪ್ರತಿಜ್ಞಾವಿಧಿ ಸ್ವೀಕಾರ ಮೊದಲಾದ ಕಾರ‌್ಯಕ್ರಮಗಳ ಮೂಲಕ ಮತದಾನ ಪ್ರಮಾಣ ಹೆಚ್ಚಿಸಲು ಸ್ವೀಪ್ ಸಮಿತಿ ಇನ್ನಿಲ್ಲದ ಕಸರತ್ತು ನಡೆಸಿದೆ.
*ಸಹಿ ಅಂದೋಲನ: ಜಿಲ್ಲಾ ಮತ್ತು ತಾಲೂಕು ಕೇಂದ್ರಗಳು ಸೇರಿ ಹಲವೆಡೆ ಸಹಿ ಅಂದೋಲನ ಏರ್ಪಡಿಸಲಾಗಿದೆ ಹಾಗೂ ಮತದಾನ ಜಾಗೃತಿಗೆ ಸಂಬಂಧಿಸಿದಂತೆ ಕರಪತ್ರ ವಿತರಿಸಲಾಗುತ್ತಿದೆ. ಏ.22ರಂದು ಚಿತ್ರದುರ್ಗ ನಗರದಲ್ಲಿ ಬೃಹತ್ ಜಾಗೃತಿ ಜಾಥಾ ಆಯೋಜಿಸಲಾಗುತ್ತಿದೆ. ಅಂದಾಜು ಒಂದು ಸಾವಿರಕ್ಕೂ ಹೆಚ್ಚು ಜನರು ಜಾಥಾದಲ್ಲಿ ಭಾಗವಹಿಸಲಿದ್ದಾರೆ.
*ವಿಶೇಷ ಮತಗಟ್ಟೆಗಳು: ಈ ಬಾರಿ ಚುನಾವಣೆಯಲ್ಲೂ ಸಖಿ, ಯುವ, ಅಂಗವಿಕಲ, ಯತ್ನಿಕ್ ಹಾಗೂ ಥೀಮ್ ಆಧರಿಸಿದ ಬೂತ್‌ಗಳನ್ನು ತೆರೆಯಲಾಗುತ್ತಿದೆ. ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿ 2167 ಮತಗಟ್ಟೆಗಳ ಪೈಕಿ ಚಿತ್ರದುರ್ಗ ಜಿಲ್ಲೆಯಲ್ಲಿ 1661 ಮತಗಟ್ಟೆಗಳಿದ್ದು, ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಹಿಳೆಯರೇ ಸಂಪೂರ್ಣವಾಗಿ ಮತದಾನ ಪ್ರಕ್ರಿಯೆ ನಡೆಸಿಕೊಡಲಿರುವ ಐದು ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. ಯುವಕರು ಹಾಗೂ ಅಂಗವಿಕಲರೇ ಕಾರ‌್ಯನಿರ್ವಹಿಸುವ ತಲಾ ಒಂದೊಂದು ಮತಗಟ್ಟೆಯನ್ನು ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಸ್ಥಾಪಿಸಲಾಗುತ್ತದೆ. ಇವುಗಳೊಂದಿಗೆ ತಲಾ ಒಂದೊಂದು ಯತ್ನಿಕ್ ಹಾಗೂ ಥೀಮ್ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ.
ಕಳೆದ ಚುನಾವಣೆಯಲ್ಲಿ ಕ್ಷೇತ್ರ ವ್ಯಾಪ್ತಿಯ 1760111 ಮತದಾರರ ಪೈಕಿ 1244940 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. ಈ ಬಾರಿಯ ಚುನಾವಣೆಯಲ್ಲಿ 18,56,876 ಮತದಾರರು ತಮ್ಮ ಹಕ್ಕು ಚಲಾಯಿಸಬೇಕಿದ್ದು, ಕಳೆದ ಚುನಾವಣೆಯಲ್ಲಿ ಆಗಿದ್ದ ಶೇ.70.79 ಮತದಾನ ಪ್ರಮಾಣವನ್ನು ಶೇ.5-6ಕ್ಕೆ ಹೆಚ್ಚಿಸುವ ಗುರಿ ಸಮಿತಿ ಹೊಂದಿದೆ.
ಮತಗಟ್ಟೆಗಳಲ್ಲಿ ಕನಿಷ್ಠ ಮೂಲ ಸೌಕರ್ಯ ಸಹಿತ ಕಡ್ಡಾಯ ಮತದಾನದೆಡೆ ಜಾಗೃತಿ ಮೂಡಿಸಲು ಮತಗಟ್ಟೆ ಹಾಗೂ ಗ್ರಾಮಮಟ್ಟದಲ್ಲಿ ಜಾಗೃತಿ ತಂಡ ರಚಿಸಲಾಗಿದೆ. ಈ ಸಮಿತಿಗಳಲ್ಲಿ ಪಿಡಿಒ, ಗ್ರಾಮಾಡಳಿತ ಅಧಿಕಾರಿ, ಆಶಾ, ಅಂಗನವಾಡಿ ಕಾಯಕರ್ತೆಯರು, ಬಿಎಲ್‌ಒ ಇದ್ದಾರೆ.

ಕಳೆದ ಲೋಕಸಭಾ ಚುನಾವಣೆಗಳ ಮತದಾನದ ಪ್ರಮಾಣ
ವರ್ಷ- ಶೇಕಡ
2004 -69.65
2009 -54.50
2014 -66.07
2019 -70.79

*ಕೋಟ್
ಮತದಾನ ಜಾಗೃತಿಗಾಗಿ ಈಗಾಗಲೇ ಹಲವು ಕಾರ‌್ಯಕ್ರಮಗಳನ್ನು ಆಯೋಜಿಸಲಾಗಿದೆ. ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಸಹಿ ಅಂದೋಲನ ಹಾಗೂ ಕರಪತ್ರ ವಿತರಿಸಲಾಗುವುದು.
ಎಸ್.ಜೆ.ಸೋಮಶೇಖರ್, ಸಿಇಒ, ಜಿಪಂ, ಚಿತ್ರದುರ್ಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net