ಮತದಾನ ಪ್ರತಿಯೊಬ್ಬರ ಸಂವಿಧಾನಿಕ ಹಕ್ಕು

8de89bd2-4871-4639-97b1-3323d3a1266f
Published on

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಮಾಡುವುದು ಪ್ರತಿಯೊಬ್ಬರ ಸಂವಿಧಾನಾತ್ಮಕ ಹಕ್ಕಾಗಿದ್ದು, ಯಾರು ಮತದಾನದಿಂದ ದೂರ ಉಳಿಯಬಾರದು ಎಂದು ಜಿಪಂ ಸಿಇಒ ಕೆ.ಎಂ. ಗಾಯತ್ರಿ ತಿಳಿಸಿದರು.


ಮತದಾನ ಜಾಗೃತಿ ಅಂಗವಾಗಿ ಜಿಲ್ಲಾಡಳಿತ ಮತ್ತು ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ನಗರದ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಅಂಗವಿಕಲರಿಗೆ ತ್ರಿಚಕ್ರ ವಾಹನದ ಮೂಲಕ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದರು.


ಅಂಗವಿಕಲರು ಮೇ 10ರಂದು ಮತ ಚಲಾಯಿಸಬೇಕು. ಅವರಿಗೆ ಆತ್ಮವಿಶ್ವಾಸ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಿದೆ. ಅವರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಲು ಅನುಕೂಲವಾಗುವಂತೆ ಅಂಗವಿಕಲರ ಮತಗಟ್ಟೆಗಳನ್ನು ವಿಶೇಷವಾಗಿ ನಿರ್ಮಿಸಿದ್ದು, ಅಲ್ಲಿ ರ‌್ಯಾಂಪ್, ಗಾಲಿ ಚೇರ್ ವ್ಯವಸ್ಥೆ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ಅವರ ಸಿಬ್ಬಂದಿಯನ್ನು ನೇಮಿಸಲಾಗಿದೆ. ಅವರು ಸರತಿ ಸಾಲಿನಲ್ಲಿ ನಿಂತು ಆಯಾಸ ಪಡುವುದು ಬೇಡ ಎಂಬ ಉದ್ದೇಶದಿಂದ ನಿರೀಕ್ಷಣಾ ಕೊಠಡಿ ನಿರ್ಮಿಸಲಾಗಿದೆ ಎಂದು ಹೇಳಿದರು.


ಜಿಪಂ ಆವರಣದಿಂದ ಹೊರಟ ಜಾಥಾ, ರಾಮಸ್ವಾಮಿ ವೃತ್ತ, ಸಂಸ್ಕೃತ ಪಾಠಶಾಲೆ ವೃತ್ತ, ಗನ್ ಹೌಸ್ ವೃತ್ತ, ಹಾಡಿರ್ಂಗ್ ವೃತ್ತದ ಮೂಲಕ ಅರಮನೆ ಆವರಣದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಬಳಿ ಅಂತ್ಯಗೊಳ್ಳಲಿದೆ.


ಜಿಪಂ ಉಪಕಾರ್ಯದರ್ಶಿ (ಅಭಿವೃದ್ಧಿ) ಎಂ. ಕೃಷ್ಣರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣ, ಜಿಪಂ ಸಹಾಯಕ ನಿರ್ದೇಶಕ ಎಂ.ಎಲ್. ವಿಶ್ವನಾಥ್, ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಮಾಲಿನಿ, ಜಿಲ್ಲಾ ವಿಕಲಚೇತನರ ಒಕ್ಕೂಟದ ಅಧ್ಯಕ್ಷ ಶ್ರೀಧರ್ ಧೀಕ್ಷಿತ್ ಸೇರಿದಂತೆ ಇತರ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net