

ದಾವಣಗೆರೆ: ಗ್ರಾಮೀಣ ಪ್ರದೇಶದ ಮತದಾರರಿಗೆ ಮತದಾನ ಜಾಗೃತಿ ಮೂಡಿಸುವ ಸಂಬಂಧ ಜಿಲ್ಲಾ ಪಂಚಾಯಿತಿ, ದಾವಣಗೆರೆ ತಾಪಂ ಸಹಯೋಗದಲ್ಲಿ ಶುಕ್ರವಾರ ಬೆಳಗ್ಗೆ ಬೈಕ್ ರ‌್ಯಾಲಿ ಆಯೋಜಿಸಲಾಗಿತ್ತು.
ಜಿಪಂ ಕಚೇರಿ ಆವರಣದಲ್ಲಿ ಆರಂಭವಾದ ರ‌್ಯಾಲಿಗೆ ಜಿಪಂ ಸಿಇಒ ಸುರೇಶ ಇಟ್ನಾಳ್ ಚಾಲನೆ ನೀಡಿದರು. ಶಿರಮಗೊಂಡನಹಳ್ಳಿ, ಹದಡಿ, ಕೈದಾಳೆ, ಶ್ಯಾಗಲೆ, ಕಂದಗಲ್ಲು, ಬಾಡ, ಅತ್ತಿಗೆರೆ, ಕುರ್ಕಿ, ತೋಳಹುಣಸೆ ಮಾರ್ಗವಾಗಿ ಸಾಗಿದ ರ‌್ಯಾಲಿ ಜಿಪಂ ಕಚೇರಿಗೆ ಮರಳಿತು.
ಜಿಪಂ ಸಿಬ್ಬಂದಿ, ಪಿಡಿಒಗಳು ಕೈಯಲ್ಲಿ ಮತ ಜಾಗೃತಿಯ ಫಲಕಗಳನ್ನು ಹಿಡಿದು ಸಾಗಿದರೆ ಮತದಾನ ಜಾಗೃತಿ ಗೀತೆಗಳು ಮಾರ್ಗದುದ್ದಕ್ಕೂ ಮೊಳಗಿದವು.
ಕಾರ್ಯಕ್ರಮದಲ್ಲಿ ಜಿಪಂ ಮುಖ್ಯ ಯೋಜನಾಧಿಕಾರಿ ಮಲ್ಲಾನಾಯ್ಕ್, ತಾಪಂ ಇಒ ಆನಂದ್, ಜಿಪಂ ಸಹಾಯಕ ನಿರ್ದೇಶಕ ಕೆ.ಟಿ.ಕರಿಬಸಪ್ಪ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿ, ಸಿಬ್ಬಂದಿ ಇದ್ದರು.
--