

ಹಾಸನ: ಲೋಕಸಭಾ ಚುನಾವಣೆಯಲ್ಲಿ ನಮ್ಮದೊಂದು ಮತ ಹಾಕದೇ ಇದ್ದರೆ ಏನೂ ಆಗುವುದಿಲ್ಲ ಎಂಬ ನಿರ್ಲಕ್ಷ್ಯ ಬೇಡ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರೂ ಮತ ಚಲಾಯಿಸಬೇಕು ಎಂದು ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಕರೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಆವರಣದಲ್ಲಿ ಲೋಕಸಭಾ ಚುನಾವಣೆ 2024, ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಬೈಕ್ ರ‌್ಯಾಲಿಗೆ ಚಾಲನೆ ನೀಡಿ ಮಾತನಾಡಿದ ಅವರು, ನಗರ ಪ್ರದೇಶದ ಕೆಲವರು ನಮ್ಮದೊಂದು ಮತ ಹಾಕದಿದ್ದರೇ ಏನೂ ಆಗುವುದಿಲ್ಲ ಎಂದು ಸುಮ್ಮನಾಗುವುದುಂಟು. ಆ ಮನೋಧೋರಣೆ ಬಿಟ್ಟು ಮತಾದರರ ಪಟ್ಟಿಯಲ್ಲಿರುವ ಎಲ್ಲಾ ಮತದಾರರೂ ಮತ ಹಾಕುವ ಮೂಲಕ ತಮ್ಮ ಹಕ್ಕು ಚಲಾಯಿಸಬೇಕು ಎಂದು ಹೇಳಿದರು.
ಈ ಸಂಬಂಧ ನಾವೆಲ್ಲರೂ ಹಾಗೂ ಸರಕಾರಿ ನೌಕರರು ಜಾಗೃತಿ ಮೂಡಿಸುತ್ತಿದ್ದು, ಈ ಮೂಲಕವಾದರೂ ನೂರರಷ್ಟು ಮತ ಚಲಾಯಿಸಲಿ ಎಂಬುದು ನಮ್ಮ ಉದ್ದೇಶವಾಗಿದೆ.ಮತ ಹಾಕಿದ ಪುರುಷ ಹೀರೋ, ಮಹಿಳೆ ಹೀರೋಯಿನ್, ಮತ ಹಾಕದವರು ಝೀರೋ ಎಂದು ತಮ್ಮದೇ ಶೈಲಿಯಲ್ಲಿ ವ್ಯಾಖ್ಯಾನಿಸಿದರು.
ವರ್ಗಾವಣೆ ಆಗಿ ಬಂದಂತಹ ಅಧಿಕಾರಿಗಳೂ ಸಹ ಯಾವುದೇ ಕಾರಣಕ್ಕೂ ಮಿಸ್ ಮಾಡದೇ ವೋಟ್ ಇಲ್ಲಿಯೇ ಮಾಡಬೇಕು. ಮತದಾನ ಎಂದರೆ ಕೈಲಿ ಇರುವ ಶಕ್ತಿ ಅದನ್ನ ಕಳೆದುಕೊಂಡರೆ ಪ್ರಜಾಪ್ರಭುತ್ವದ ಅಂತರಾತ್ಮವೇ ಕಳೆದುಕೊಂಡಂತೆ. ಚುನಾವಣೆ ಕುರಿತಂತೆ ಮತದಾರರನ್ನು ಆಕರ್ಷಣೆ ಮಾಡುವಂತಹ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಸಿಇಒ ಅವರು ಹಮ್ಮಿಕೊಳ್ಳಲಿ ಎಂದು ಶುಭ ಹಾರೈಸಿದರು.
ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ.ಆರ್.ಪೂರ್ಣಿಮಾ ಮಾತನಾಡಿ, ಮತದಾನ ಜಾಗೃತಿಗಾಗಿ ಜಿಲ್ಲಾ ಪಂಚಾಯತ್ ಮತ್ತು ನಗರಸಭೆಯಿಂದ ಬೈಕ್ ರ‌್ಯಾಲಿ ಹಮ್ಮಿಕೊಳ್ಳಲಾಗಿದೆ. ಪ್ರಜಾಪ್ರಭುತ್ವವನ್ನು ಗಟ್ಟಿಗೊಳ್ಳಿಸುವ ಕೆಲಸವನ್ನು ಎಲ್ಲರೂ ಮತದಾನ ಮಾಡುವ ಮೂಲಕ ನಿರ್ವಹಿಸಬೇಕು. ನಗರ ಪ್ರದೇಶದ 84 ಮತಗಟ್ಟೆಗಳಲ್ಲಿ ನ್ಯಾಷನಲ್ ಅವರೇಜ್‌ಗಿಂತ ಕಡಿಮೆ ಇದೆ ಎಂದು ಬೇಸರ ವ್ಯಕ್ತಪಡಿಸಿದರು.
ಮನೆ ಮನೆಗಳಿಗೆ ಭೇಟಿ ಕೊಡುವುದರ ಮೂಲಕ ಮತಗಟ್ಟೆಗಳಲ್ಲಿ ಶೇಕಡಾವಾರು ಮತ ಚಲಾಯಿಸಲು ಪ್ರೋತ್ಸಾಹಿಸುವ ಕೆಲಸ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಎಲ್ಲರೂ ಮತ ಹಾಕುವುದರ ಮೂಲಕ ನೂರರಷ್ಟು ಮತದಾನ ಆಗಲು ಸಹಕರಿಸಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಪಂ ಅಧಿಕಾರಿ ಪರಪ್ಪಸ್ವಾಮಿ, ಯುವಜನ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಸಿ.ಕೆ. ಹರೀಶ್, ನಗರಸಭೆ ಆಯುಕ್ತ ಯೋಗೇಂದ್ರ, ಹಿರಿಯ ಕಲಾವಿದ ಬಿ.ಟಿ. ಮಾನವ ಇತರರು ಇದ್ದರು.