ಮತದಾನ ಜಾಗೃತಿ ಚುರುಕು

hubli officers create awareness of voting
Published on

ಹುಬ್ಬಳ್ಳಿ: ಧಾರವಾಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಸ್ವೀಪ್​ ಸಮಿತಿ, ತಾಲೂಕು ಪಂಚಾಯತ ವತಿಯಿಂದ ಜಿಲ್ಲೆಯ ವಿವಿಧೆಡೆ ಮತದಾನ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿವೆ.
ತಾಲೂಕಿನ ನೂಲ್ವಿ ಗ್ರಾಮದಲ್ಲಿ ಅಂಗವಿಕಲರ ತ್ರಿಚಕ್ರ ವಾಹನದ ಮುಖಾಂತರ ಮತದಾನ ಜಾಗೃತಿ ರ್ಯಾಲಿ ಏರ್ಪಡಿಸಲಾಗಿತ್ತು.

ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಗಂಗಾಧರ ಕಂದಕೂರ ಮಾತನಾಡಿ, ಪ್ರತಿಯೊಬ್ಬ ಮತದಾರರು ಸ್ವಯಂ ಪ್ರೇರಣೆಯಿಂದ ಮತಗಟ್ಟೆಗೆ ಆಗಮಿಸಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವವನ್ನು ಗೆಲ್ಲಿಸಬೇಕೆಂದು ಹೇಳಿದರು.

ತಾಪಂ ಹುಬ್ಬಳ್ಳಿ ನರೇಗಾ ಸಹಾಯಕ ನಿರ್ದೇಶಕ ಸದಾನಂದ ಅಮರಾಪುರ ಮಾತನಾಡಿ, ಮೇ 10ರಂದು ಮತದಾನ ಮಾಡುವುದನ್ನು ಯಾರೂ ಮರೆಯಬಾರದು. ಎಲ್ಲರೂ ಕಡ್ಡಾಯವಾಗಿ ಮತ ನೀಡಬೇಕು ಎಂದು ತಿಳಿಸಿದರು.

ತಾಲೂಕಿನ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಡಾ. ಸಂಗಮೇಶ ಬಂಗಾರಿಮಠ ಅವರು, ಮತದಾರರು ಯಾವುದೇ ಅಸೆ ಆಮಿಷಗಳಿಗೆ ಒಳಗಾಗದೆ ಮತ ಚಲಾಯಿಸುವಂತೆ ಮನವಿ ಮಾಡಿದರು.
ಜಿಲ್ಲಾ ಸ್ವೀಪ್​ ಸಮಿತಿಯ ಅಂಗವಿಕಲರ ಪ್ರತಿನಿಧಿ ಜ್ಯೋತಿ ಸಣ್ಣಕ್ಕಿ ಅವರು, ಮತದಾರರ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.

ತಾಲೂಕಿನ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತ ಮಹಾಂತೇಶ ಕುರ್ತಕೋಟಿ, ತಾಲೂಕಿನ ಮಾಹಿತಿ ಮತ್ತು ಶಿಕ್ಷಣ ಸಂಯೋಜಕ ರಮೇಶ ಲಮಾಣಿ, ತಾಂತ್ರಿಕ ಸಂಯೋಜಕ ವೀರೇಶ ಕರ್ನಾಳ, 25 ತ್ರಿಚಕ್ರ ವಾಹನಗಳ ಜತೆಗೆ ತಾಲೂಕಿನ ಅಂಗವಿಕಲರ ಪುನರ್ವಸತಿ ಕಾರ್ಯಕರ್ತರು ಹಾಗೂ ನರೇಗಾ ತಾಂತ್ರಿಕ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಜಾಗೃತಿ ರ್ಯಾಲಿಯಲ್ಲಿದ್ದರು.

ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ವೀರಯ್ಯ ವಸ್ತ್ರದ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

ಪ್ರಜಾಪ್ರಭುತ್ವ ಗೆಲ್ಲಿಸಲು ಮನವಿ: ಹುಬ್ಬಳ್ಳಿಯ ತಾಲೂಕು ಪಂಚಾಯಿತಿ ಸ್ವೀಪ್​ ಸಮಿತಿ ವತಿಯಿಂದ ನಗರದಲ್ಲಿ ಮೊಂಬತ್ತಿ ಮೆರವಣಿಗೆ ನಡೆಸಿ ಮತದಾನ ಜಾಗೃತಿ ಮೂಡಿಸಲಾಯಿತು.

ತಾಪಂ ಇಒ ಗಂಗಾಧರ ಕಂದಕೂರ ಮಾತನಾಡಿ, ಭಾರತವು ಜನಸಂಖ್ಯೆಯಲ್ಲಿ ಎರಡನೇ ಅತಿ ದೊಡ್ಡ ದೇಶವಾಗಿದೆ.

ಚುನಾವಣೆಗಳು ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆಯುವುದು ಅತೀ ಅವಶ್ಯ. ಎಲ್ಲರೂ ಸ್ವಯಂ ಪ್ರೇರಣೆಯಿಂದ ಮತದಾನ ಮಾಡಿದಾಗ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ ಎಂದರು.

ತಾಲೂಕು ಆಡಳಿತ ಸೌಧದಿಂದ ಪ್ರಾರಂಭವಾದ ಕ್ಯಾಂಡಲ್​ ಮಾರ್ಚ್​ ಸಂಗೊಳ್ಳಿ ರಾಯಣ್ಣನ ವೃತ್ತದ ಮೂಲಕ ಸಾಗಿ ಮಾರುಕಟ್ಟೆ ಪ್ರದೇಶದಲ್ಲಿ ಚುನಾವಣೆ ಜಾಗೃತಿ ಮೂಡಿಸಲಾಯಿತು.

ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸಿ.ಆರ್​. ಅಂಬಿಗೇರ, ಹಿಂದುಳಿದ ವರ್ಗಗಳ ಇಲಾಖೆಯ ವಿಸ್ತರ್ಣಾಧಿಕಾರಿ ಸುರೇಶ ಗುರಣ್ಣವರ, ಶಹರ ಮತ್ತು ಗ್ರಾಮೀಣ ವಲಯಗಳ ದೈಹಿಕ ವಿಷಯ ಪರಿವೀಕ್ಷಕರಾದ ನಾಗರಾಜಪ್ಪ ಮತ್ತು ತಿಮ್ಮರೆಡ್ಡಿ, ತಾಲೂಕು ಸ್ವೀಪ್​ ತರಬೇತಿದಾರ ಡಾ. ರಾಜಕುಮಾರ ಪಾಟೀಲ್​ ಮತ್ತು ವಿದ್ಯಾಥಿರ್ನಿಯರು ರ್ಯಾಲಿಯಲ್ಲಿ ಭಾಗವಹಿಸಿದ್ದರು.

ಬಿಲ್​ನಲ್ಲೂ ಮನವಿ: ಹುಬ್ಬಳ್ಳಿ ವಿದ್ಯುತ್​ ಸರಬರಾಜು ಕಂಪನಿ ಲಿಮಿಟೆಡ್​ ತನ್ನ ಗ್ರಾಹಕರಿಗೆ ಬಿಲ್​ ನೀಡುತ್ತಿದ್ದು, ಅದರಲ್ಲೂ ಜಾಗೃತಿ ಮೂಡಿಸಲಾಗುತ್ತಿದೆ. ಮೇ 10ರಂದು ತಪ್ಪದೇ ಮತದಾನ ಮಾಡಿ ಎಂದು ಬಿಲ್​ನ ಕೆಳಭಾಗದಲ್ಲಿ ಬರೆಯಲಾಗಿದೆ. ಈ ಮೂಲಕ ಹೆಸ್ಕಾಂ ಕೂಡ ಜಾಗೃತಿಗೆ ಕೈಜೋಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net