ಮತದಾನ ಅಸ್ತ್ರ ಸದ್ಬಳಕೆಯಾಗಲಿ: ಪ್ರೊ.ಅರವಿಂದ ಮಾಲಗತ್ತಿ

3
Published on

ಮೈಸೂರು: ಮತದಾರರು ತಮ್ಮ ಮತ ಅಸ್ತ್ರವನ್ನು ಸರಿಯಾಗಿ ಸದ್ಬಳಕೆ ಮಾಡದಿದ್ದರೆ ಜನತೆಯ ಮುಖವಾಣಿಯಾಗಬೇಕಾಗಿರುವ ಸಂವಿಧಾನ ಯಾವುದೋ ಒಂದು ಪಕ್ಷದ ಮುಖವಾಣಿಯಾಗುತ್ತದೆ ಎಂದು ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ ಎಚ್ಚರಿಸಿದರು.
ದಲಿತ ಸಂಘರ್ಷ ಸಮಿತಿಯಿಂದ ಮಂಗಳವಾರ 74ನೇ ಗಣರಾಜ್ಯೊತ್ಸವ ನಿಮಿತ್ತ ಮಾನಸಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಆಯೋಜಿಸಿದ್ದ ಭಾರತದ ಗಣರಾಜ್ಯ-ವರ್ತಮಾನದ ತಲ್ಲಣಗಳು ವಿಷಯ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. ವರ್ತಮಾನದ ತಲ್ಲಣಗಳು 5 ವರ್ಷಕ್ಕೊಮ್ಮೆ ಹುಟ್ಟಿ ಸಾಯುತ್ತವೆ. ನಮ್ಮ ಕೈಯಲ್ಲಿರುವ ಮತದಾನದ ಅಸ್ತ್ರವನ್ನು ಸರಿಯಾದ ರೀತಿ ಬಳಸದಿದ್ದರೆ ಮುಂದಿನ ಐದು ವರ್ಷ ಪಶ್ಚಾತಪಡಬೇಕಾಗುತ್ತದೆ. ತಲ್ಲಣಗಳಿಗೆ ನಾವೇ ಆಸ್ಪದ ಕೊಟ್ಟಂತಾಗುತ್ತದೆ. ಮತವನ್ನು ಮಾರಿಕೊಳ್ಳದಿದ್ದರೆ ಸಂವಿಧಾನ ಜನತೆಯ ಮುಖವಾಣಿಯಾಗುತ್ತದೆ. ಜನಪರ, ಸಂವಿಧಾನ ಬದ್ಧವಾಗಿ ಇರುವವರು ಯಾರು ಎಂಬುದನ್ನು ಮತದಾರರು ಸೂಕ್ಷ್ಮವಾಗಿ ಗ್ರಹಿಸಬೇಕು ಎಂದು ಸಲಹೆ ನೀಡಿದರು.
ಇಂದಿನ ದಿನಮಾನದಲ್ಲಿ ಸಾಕಷ್ಟು ಗೊಂದಲ, ತಲ್ಲಣಗಳಿವೆ. ಸುಪ್ರಿಂಕೋರ್ಟ್ ಕೊಲಿಜಿಯಂ ವ್ಯವಸ್ಥೆ ಬಗ್ಗೆ ನಿವೃತ್ತ ನ್ಯಾಯಾಧೀಶರಾದ ಸಂತೋಷ್ ಹೆಗ್ಡೆ ಪ್ರಬುದ್ಧ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿದ್ಯುನ್ಮಾನ ಮಾಧ್ಯಮಗಳು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ತಮ್ಮ ಪ್ರವೃತ್ತಿಯನ್ನು ಬದಲಿಸಿಕೊಳ್ಳದಿದ್ದರೆ ಪ್ರಜಾಪ್ರಭುತ್ವ ವ್ಯವಸ್ಥೆಯ ನಾಲ್ಕನೇ ಅಂಗ ಎಂಬ ಸ್ಥಾನವನ್ನು ಪತ್ರಿಕೋದ್ಯಮ ಕಳೆದುಕೊಳ್ಳಲಿವೆ ಎಂದು ಕಳವಳ ವ್ಯಕ್ತಪಡಿಸಿದರು.
ದೇಶದಲ್ಲಿ ಗಣರಾಜ್ಯಕ್ಕೂ ಮೊದಲು ರಾಜರು ಆಳ್ವಿಕೆ ಮಾಡುತ್ತಿದ್ದು, ರಾಜ-ರಾಣಿಯರು ಇಲ್ಲವೇ ಅವರ ಪುತ್ರರು ಅಧಿಕಾರ ಮುನ್ನಡೆಸುತ್ತಿದ್ದರು. ಪ್ರಜಾರಾಜ್ಯದಲ್ಲಿ ಜನತೆಯ ಮತ ಪೆಟ್ಟಿಗಳಿಂದ ರಾಜ ಹೊರಬರುತ್ತಾನೆ. ಪ್ರಜಾಪ್ರಭುತ್ವದಲ್ಲಿ ಜನರು ತಮ್ಮ ರಾಜನನ್ನು ಆಯ್ಕೆ ಮಾಡುತ್ತಾರೆ. ಗಣರಾಜ್ಯ ದಿನವನ್ನು ಸಂವಿಧಾನ ದಿನಾಚರಣೆ ಎಂದು ಕರೆಯುವ ಅಗತ್ಯವಿದೆ. ಈ ಪದ ಬಳಕೆಗೆ ಸರ್ಕಾರದ ಆದೇಶಕ್ಕಾಗಿ ಕಾಯ ಬೇಕಾಗಿಲ್ಲ. ಜನಾದೇಶವೇ ಸರ್ಕಾರದ ಆದೇಶವಾಗುತ್ತದೆ. ಹಾಗಾಗಿ ಸಂವಿಧಾನ ದಿನಾಚರಣೆ ಎಂದು ಹೆಚ್ಚು ಹೆಚ್ಚು ಬಳಸಬೇಕು ಎಂದು ಕಿವಿಮಾತು ಹೇಳಿದರು.
ದಸಂಸ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ ಅಧ್ಯಕ್ಷತೆ ವಹಿಸಿದ್ದರು. ದೇವರಾಜ್ ಟಿ.ಕಾಟೂರ್, ಪರಂಜ್ಯೋತಿ, ನಟರಾಜ್, ಶಿವಣ್ಣ, ಕಿರಂಗೂರುಸ್ವಾಮಿ, ಕೆ.ವಿ.ದೇವೇಂದ್ರ, ಪತ್ರಕರ್ತ ಬಿ.ಎಂ.ಹನೀಫ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net