ಮತದ ಹೆಸರಿನಲ್ಲಿ ಅಂಬೇಡ್ಕರ್ ಹೆಸರು ದುರ್ಬಳಕೆ: ಪ್ರೊ.ಎಂ.ಎಸ್ ಶೇಖರ್ ಕಳವಳ

mysore
Published on

ಮೈಸೂರು: ವಿಶ್ವ ಜ್ಞಾನಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ರಾಜಕೀಯ ಪಕ್ಷಗಳು ವೋಟಿನ ಹೆಸರಿನಲ್ಲಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಜತೆಗೆ, ದಲಿತರು, ಮಹಿಳೆಯರು, ಅಸಹಾಯಕರನ್ನು ಬಳಸಿಕೊಂಡು ಮಹಾಮೋಸ ಎಸಗುತ್ತಿವೆ ಎಂದು ಮೈಸೂರು ವಿವಿಯ ಕಲಾ ನಿಕಾಯ ಡೀನ್ ಪ್ರೊ.ಎಂ.ಎಸ್ ಶೇಖರ್ ಕಳವಳ ವ್ಯಕ್ತಪಡಿಸಿದರು.

ಮೈಸೂರು ವಿಶ್ವವಿದ್ಯಾಲಯದ ಕಾನೂನು ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಂಬೇಡ್ಕರ್ ಅವರನ್ನು ಪೋಸ್ಟರ್ ಮತ್ತು ಬ್ಯಾನರ್‌ಗಳಿಗೆ ಸೀಮಿತಗೊಳಿಸಲಾಗುತ್ತಿದೆ. ದೇಶದ ಪ್ರಜೆಗಳ ಮನ ಮನೆಗಳಲ್ಲಿ ಅವರ ಚಿಂತನೆ ಅನುಷ್ಠಾನದ ಕೆಲಸವಾಗುತ್ತಿಲ್ಲ. ಇದು ಸರಿಯಲ್ಲ. ಪ್ರತಿಯೊಬ್ಬರು ತಮ್ಮ ಕೆಲಸದಲ್ಲಿ, ನಡೆ-ನುಡಿಗಳಲ್ಲಿ ಅಂಬೇಡ್ಕರ್ ಅವರನ್ನು ಕಾಣಬೇಕು ಎಂದರು.

ರಾಜಕೀಯ ಪಕ್ಷಗಳು ದಲಿತರ ಮತದ ಓಲೈಕೆಗಾಗಿ ಅಂಬೇಡ್ಕರ್ ಅವರ ಫೋಟೊ ಮತ್ತು ಹೆಸರನ್ನು ರಾಜಕೀಯ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದರು.

ಅಂಬೇಡ್ಕರ್ ಅವರ ಜನ್ಮದಿನವನ್ನು ವಿಶ್ವ ಜ್ಞ್ಞಾನ ದಿನ ಎಂದು ವಿಶ್ವ ಸಂಸ್ಥೆ ಆಚರಣೆ ಮಾಡುತ್ತಿದೆ. ಅಂಬೇಡ್ಕರ್ ಬಗ್ಗೆ ಸಾಮಾನ್ಯ ಜ್ಞಾನವಿದ್ದರೆ, ಯಾರೊಬ್ಬರು ನಕಾರಾತ್ಮಕ ಆಲೋಚನೆ, ಚಿಂತನೆ ಮಾಡಲಾಗದು. ಆದರೀಗ ಅಂಬೇಡ್ಕರ್ ಬಗ್ಗೆ ಸುಳ್ಳು ಮಾಹಿತಿ ನೀಡುವ ಕೆಲಸವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಂಬೇಡ್ಕರ್ ರಚಿಸಿದ ಸಂವಿಧಾನದ ಆಶ್ರಯ ಪಡೆಯದ ಯಾವುದೇ ವ್ಯಕ್ತಿ ಇಲ್ಲ. ಸರ್ವರನ್ನು ಗಮನದಲ್ಲಿಟ್ಟುಕೊಂಡು ಸಮಾನ ಹಕ್ಕು ಮತ್ತು ಕರ್ತವ್ಯದ ಸಂವಿಧಾನ ಕೊಟ್ಟಿದ್ದಾರೆ. ಹಿಂದು ಬಿಲ್ ಕೋಡ್ ಮೂಲಕ ಸರ್ವಜನಾಂಗದ ಹೆಣ್ಣು ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಪ್ರಯತ್ನಿಸಿದರು ಎಂದರು.

ಮೈಸೂರು ವಿಶ್ವವಿದ್ಯಾಲಯ ಆಡಳಿತಾಧಿಕಾರಿ ಡಾ.ಎಸ್.ಟಿ.ರಾಮಚಂದ್ರ, ಕಾನೂನು ಶಾಲೆಯ ಅಧ್ಯಕ್ಷ ಡಾ.ಎಂ ಸುರೇಶ್ ಬೆಂಜಮಿನ್, ಉಪನ್ಯಾಸಕ ರೋಹಿತ್ ರಾಮಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net