

ವಿರಾಜಪೇಟೆ: ಪ್ರಧಾನಿ ನರೇಂದ್ರ ಮೋದಿ ಅವರು ಯಶಸ್ವಿಯಾಗಿ ಹತ್ತು ವರ್ಷ ಜನಪರ ಆಡಳಿತ ನೀಡಿದ್ದು, ಮತ್ತೊಮ್ಮೆ ಅವರನ್ನು ಪ್ರಧಾನಿಯನ್ನಾಗಿ ಮಾಡಲು ಕಾರ್ಯಕರ್ತರು ಉತ್ಸುಕರಾಗಿದ್ದು, ಮೋದಿ ಅವರನ್ನು ಮೂರನೇ ಅವಧಿಗೆ ಪ್ರಧಾನಿಯಾಗಿಸಲು ಸಂಕಲ್ಪ ಮಾಡಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಕೊಡಗು- ಮೈಸೂರು ಲೋಕಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿ ಡಾ.ಅಶ್ವತ್ಥನಾರಾಯಣ ಕರೆ ನೀಡಿದರು.
ವಿರಾಜಪೇಟೆಯ ಸೆರಿನಿಟಿ ಹಾಲ್‌ನಲ್ಲಿ ಗುರುವಾರ ಏರ್ಪಡಿಸಿದ್ದ ವಿರಾಜಪೇಟೆ ಮಂಡಲದ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು. ಕೊಡಗು ಜಿಲ್ಲೆಯು ವೀರ ಸೇನಾನಿಗಳ ನಾಡು, ಕೊಡಗಿನ ಜನರು ದೇಶಭಕ್ತಿಗೆ ಹೆಸರಾದವರು. ಕೊಡಗು ರಾಜ್ಯ ಮಾತ್ರವಲ್ಲದೆ ರಾಷ್ಟ್ರ ಮಟ್ಟದಲ್ಲೂ ಪ್ರಸಿದ್ಧಿ ಪಡೆದಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಯೋಜನೆಗಳ ಮುಖಾಂತರ ಜನಪರ ಆಡಳಿತ ನೀಡಿದ್ದಾರೆ. ಸ್ವಚ್ಛ ಭಾರತ, ವಿಕಸಿತ ಭಾರತದಂತಹ ಕಾರ್ಯಕ್ರಮವನ್ನು ರೂಪಿಸಿದ್ದಾರೆ. ಭಾರತವನ್ನು ವಿಶ್ವಗುರುವನ್ನಾಗಿಸಲು ಪ್ರಯತ್ನಪಟ್ಟಿದ್ದಾರೆ. ಕಾರ್ಯಕರ್ತರು ಕೇಂದ್ರ ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಮನೆ ಮನೆಗೆ ತೆರಳಿ ಮಾಹಿತಿ ನೀಡಬೇಕು ಎಂದರು.
ಸಂಸದ ಪ್ರತಾಪ್ ಸಿಂಹ ಮಾತನಾಡಿ, ಕಾರ್ಯಕರ್ತರು ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಬೇಕು. ಪಕ್ಷದ ಒಳಗಿನ ಅಸಮಾಧಾನವನ್ನು ಪಕ್ಷದಲ್ಲೇ ಸರಿಪಡಿಸಿಕೊಳ್ಳಬೇಕು. ಪ್ರಧಾನಿ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗುವುದು ಶತಃಸಿದ್ಧವಾಗಿದ್ದು, ಕಾರ್ಯಕರ್ತರು ಮೈ ಮರೆಯದೆ ಸಂಘಟನಾ ಕಾರ್ಯದಲ್ಲಿ ತೊಡಗಬೇಕು ಎಂದರು.
ಅಟಲ್ ಬಿಹಾರಿ ವಾಜಪೇಯಿ ತದನಂತರದಲ್ಲಿ ಪ್ರಧಾನಿ ಮೋದಿ ಅವರು ಜನಪರ ಆಡಳಿತ ನೀಡುತ್ತಾ ಬಂದಿದ್ದು, ಪಕ್ಷದ ಕಾರ್ಯಕರ್ತರು ಜನರ ಬಳಿಗೆ ತೆರಳಿ ಅಭಿವೃದ್ಧಿ ಕಾರ್ಯಕ್ರಮಗಳ ಮಾಹಿತಿ ನೀಡಬೇಕು ಎಂದರು.
ಕಾರ್ಯಕರ್ತರು ಪಕ್ಷದ ಜೀವಾಳವಾಗಿದ್ದು, ಪಕ್ಷವನ್ನು ಅಧಿಕಾರಕ್ಕೆ ತರುವುದು ಪ್ರತಿ ಕಾರ್ಯಕರ್ತನ ಜವಾಬ್ದಾರಿಯಾಗಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಗಂಡಾಂತರವಾಗಲಿದೆ ಎಂದು ಭವಿಷ್ಯ ನುಡಿದರು.
ಮಾಜಿ ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಆತ್ಮವಿಶ್ವಾಸದಿಂದ ನಾವು ಚುನಾವಣೆಗೆ ತಯಾರಾಗಬೇಕಾಗಿದೆ. ಕಾರ್ಯಕರ್ತರು ತಮಗೆ ಎದುರಾಗುವ ಎಲ್ಲ ಸವಾಲುಗಳನ್ನು ಎದುರಿಸಬೇಕು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಬೇಕು. ದೇಶವು ಮುನ್ನಡೆಯಬೇಕು. ಕರ್ನಾಟಕದಲ್ಲಿ ಈ ಬಾರಿ 28 ಸ್ಥಾನಗಳಲ್ಲಿ 28 ಸ್ಥಾನವನ್ನೂ ಗೆಲ್ಲುವ ಉದ್ದೇಶ ಪಕ್ಷದಾಗಿದೆ ಎಂದರು.
ದೇಶದ ಅಖಂಡತೆಯನ್ನು ಕಾಪಾಡಲು, ಭ್ರಷ್ಟಾಚಾರ ರಹಿತ ಆಡಳಿತ ನೀಡಲು ಪಕ್ಷ ಅಧಿಕಾರಕ್ಕೆ ಬರಬೇಕು ಎಂದರು.
ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಮಾಜಿ ಎಂಎಲ್ಸಿ ಸುನಿಲ್ ಸುಬ್ರಮಣಿ, ಭಾರತೀಯ ಜನತಾ ಪಕ್ಷದ ಮುಖಂಡರಾದ ಪಟ್ಟಡ ರೀನಾ ಪ್ರಕಾಶ್, ಮಾಚಿಮಂಡ ಸುವಿನ್ ಗಣಪತಿ, ಪಳೆಯಂಡ ರಾಬಿನ್ ದೇವಯ್ಯ, ನೆಲ್ಲಿರ ಚಲನ್, ಅನಿತಾ ಪೂವಯ್ಯ, ಪಟ್ರಪಂಡ ರಘು ನಾಣಯ್ಯ ಮುಂತಾದವರು ಉಪಸ್ಥಿತರಿದ್ದರು.
ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು ಹಾಜರಿದ್ದರು.