ಮತ್ತೇ ಮುನ್ನೆಲೆಗೆ ಬಂದ ಚಿಕ್ಕ ಮಾದಿನಾಳ ಜಿಪಂ ರಚನೆ

ಕೆಎನ್ಕೆ 2
ಸಚಿವ ಶಿವರಾಜ ತಂಗಡಗಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಕಾಂಗ್ರೆಸ್ ನಿಯೋಗ
Published on

ಕನಕಗಿರಿ: ಜನಸಂಖ್ಯೆ ಕೊರತೆಯಿಂದ ರದ್ದಾಗಿದ್ದ ತಾಲೂಕಿನ ಚಿಕ್ಕ ಮಾದಿನಾಳ ಜಿಪಂ ಕ್ಷೇತ್ರ ಪುನರ್ ಸ್ಥಾಪಿಸಬೇಕೆಂದು ಕಾಂಗ್ರೆಸ್ ನಾಯಕರ ನಿಯೋಗವು ಸಚಿವರು, ಆಯೋಗದ ಅಧ್ಯಕ್ಷರನ್ನು ಭೇಟಿ ಮಾಡುತ್ತಿದ್ದಾರೆ.

ತಾಲೂಕು ವ್ಯಾಪ್ತಿಯಲ್ಲಿ ಈ ಮೊದಲು ಹುಲಿಹೈದರ್, ನವಲಿ ಜಿಪಂ ಜತೆಗೆ ಚಿಕ್ಕಮಾದಿನಾಳ- ವೆಂಕಟಗಿರಿ ಕ್ಷೇತ್ರವಿತ್ತು. ಬಿಜೆಪಿ ಸರ್ಕಾರದಲ್ಲಿ ಚುನಾವಣೆ ಘೋಷಣೆಯಾದಾಗ ಚಿಕ್ಕಮಾದಿನಾಳ ಸ್ವತಂತ್ರ ಜಿಪಂ ಕ್ಷೇತ್ರವಾಗಿ ಮೀಸಲು ನಿಗದಿಯಾದಾಗ ಆಕಾಂಕ್ಷಿಗಳ ಖುಷಿಗೆ ಪಾರವೇ ಇರಲಿಲ್ಲ.

ಆದರೆ, ಚುನಾವಣೆ ಮುಂದೂಡಿಕೆಯಾಗಿ ಆಗಿನ ಸರ್ಕಾರ ಕ್ಷೇತ್ರ ಮರುವಿಂಗಡನೆಗೆ ಮುಂದಾದಾಗ ಜನಸಂಖ್ಯೆ ಕೊರತೆಯಿಂದ ಚಿಕ್ಕ ಮಾದಿನಾಳ ಜಿಪಂ ರದ್ದಾಗಿ ಕೇವಲ ಹುಲಿಹೈದರ, ನವಲಿ ಮಾತ್ರ ಉಳಿದುಕೊಂಡಿದ್ದವು.

ಆಗಿನ ಶಾಸಕ ಬಸವರಾಜ ದಢೇಸುಗೂರು ಈ ಬಗೆಗಿನ ಹೇಳಿಕೆ ಸ್ಥಳೀಯ ನಾಯಕರ ಜತೆಗೆ ಕಾಂಗ್ರೆಸ್ ನಾಯಕರ ಕಣ್ಣು ಕೆಂಪಾಗಿಸುವಂತೆ ಮಾಡಿತ್ತು. ಕಳೆದೆರಡು ವರ್ಷಗಳಿಂದ ಮುಂದೂಡುತ್ತಾ ಬಂದಿರುವ,

ತಾಪಂ, ಜಿಪಂ ಚುನಾವಣೆಗೆ ನ್ಯಾಯಾಲಯವು ಕೆಲ ಸೂಚನೆ ನೀಡಿದ್ದರಿಂದ ಇದೀಗ ಆಕಾಂಕ್ಷಿಗಳಿಗೆ ರೆಕ್ಕೆ ಪುಕ್ಕ ಬಂದಿವೆ. ಹಿಂದೆ ಬಿಜೆಪಿ ಸರ್ಕಾರ ಹಾಗೂ ಶಾಸಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ಸ್ಥಳೀಯ ಕಾಂಗ್ರೆಸಿಗರು ಇದೀಗ ಅವರದೇ ಸರ್ಕಾರ ರಾಜ್ಯದಲ್ಲಿದ್ದು,

ಕ್ಷೇತ್ರದ ಶಾಸಕ ತಂಗಡಗಿಯೂ ಸಚಿವರಾಗಿರುವುದರಿಂದ ಕೆಲ ಆಶಾಭಾವನೆಯೊಂದಿಗೆ ಚಿಕ್ಕ ಮಾದಿನಾಳ ಜಿಪಂ ಕ್ಷೇತ್ರವನ್ನು ಮರು ರಚಿಸಲಿಕ್ಕೆ ಆಗ್ರಹಿಸುತ್ತಿದ್ದಾರೆ. ಸಚಿವ ತಂಗಡಗಿ ಸಹಿತ ಸೀಮಾ ಆಯೋಗದ ಅಧ್ಯಕ್ಷರಾದ ಎಂ.ಸಿ. ಕಾಂಬಳೆಯವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿದ್ದಾರೆ.

ಆಯೋಗದ ಅಧ್ಯಕ್ಷರಿಂದ ಸಿಗಲಿಲ್ಲವೇ ಭರವಸೆ?
ಕಾಂಗ್ರೆಸ್ ನಾಯಕರ ನಿಯೋಗವು ಸೀಮಾ ಆಯೋಗದ ಅಧ್ಯಕ್ಷರಾದ ಎಂ.ಸಿ. ಕಾಂಬಳೆಯವರನ್ನು ಶುಕ್ರವಾರ ಭೇಟಿ ಮಾಡಿದ್ದು, ಚಿಕ್ಕ ಮಾದಿನಾಳ ಜಿಪಂ ವ್ಯಾಪ್ತಿಗೆ ಸಂಬಂಧಿಸಿದ ಗ್ರಾಪಂಗಳ ಪಟ್ಟಿ ಹಾಗೂ ಜನಸಂಖ್ಯೆಯ ಮಾಹಿತಿ ಹೊಂದಿದ ಮನವಿ ಪತ್ರ ಸಲ್ಲಿಸಿದ್ದಾರೆ. 
ಆದರೆ, ಈಗಿರುವ ಆದೇಶದಂತೆ ಜಿಲ್ಲೆಯ ಜನಸಂಖ್ಯೆಗನುಗುಣವಾಗಿ ಜಿಪಂ ಕ್ಷೇತ್ರ ರಚನೆಯಾಗಲಿವೆ. ಹೊಸ ಆದೇಶ ಬಂದು ಈಗಿರುವ ಜನಸಂಖ್ಯೆ ಮಿತಿಯನ್ನು ಕಡಿಮೆಗೊಳಿಸಿದರೆ ಮಾತ್ರ ಚಿಕ್ಕಮಾದಿನಾಳ ಜಿಪಂ ಕ್ಷೇತ್ರವಾಗಬಹುದು ಎಂದುರು ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net