

ಮೈಸೂರು: ಮತಗಳ್ಳತನದ ವಿರುದ್ಧ ಚಾಮರಾಜ ವಿಧಾನಸಭಾ ಕ್ಷೇತ್ರದ ಇಂದಿರಾಗಾಂಧಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಸಹಿ ಸಂಗ್ರಹ ಅಭಿಯಾನ ನಡೆಯಿತು.
ಹೆಬ್ಬಾಳಿನ ಅಭಿಷೇಕ್ ವೃತ್ತದ ಸಮೀಪ ನಡೆದ ಸಹಿ ಸಂಗ್ರಹ ಅಭಿಯಾನದಲ್ಲಿ ಶಾಸಕ ಕೆ.ಹರೀಶ್‌ಗೌಡ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಸಹ ಮತ ಕಳ್ಳತನದಿಂದಲೇ ಜಯ ಸಾಧಿಸಿದ್ದಾರೆ.
ಬಿಜೆಪಿ ಮತಗಳ್ಳತನದಿಂದಲೇ ಹಲವು ಕ್ಷೇತ್ರಗಳನ್ನು ಗೆದ್ದು ಕೊಂಡಿದೆ. ಈ ಅಕ್ರಮ ನಡೆಯದಿದ್ದರೆ ಕಾಂಗ್ರೆಸ್ ಪಕ್ಷ ಕೇಂದ್ರದಲ್ಲೂ ಅಧಿಕಾರ ಪಡೆದುಕೊಳ್ಳುತ್ತಿತ್ತು ಎಂದರು.
ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಬೆಂಗಳೂರಿನಲ್ಲಿ ಮೊದಲ ಬಾರಿಗೆ ಅಭಿಯಾನ ಆರಂಭಿಸಿದರು. ಮತಗಳ್ಳತನ ಅಭಿಯಾನದ ಉದ್ದೇಶವೆಂದರೆ ಸ್ವಚ್ಛ ಮತ್ತು ಪಾರದರ್ಶಕ ಮತದಾರರ ಪಟ್ಟಿ, ಡಿಜಿಟಲ್ ಮತ್ತು ಪರಿಶೀಲಿಸಬಹುದಾದ ಪಟ್ಟಿ, ಸ್ವಾತಂತ್ರೃ ಮತ್ತು ನ್ಯಾಯಸಮ್ಮತ ಚುನಾವಣೆ ಮಾಡುವುದಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ನಗರ ಅಧ್ಯಕ್ಷ ಆರ್.ಮೂರ್ತಿ, ಭೋವಿ ಅಭಿವೃದ್ಧಿ ನಿಗಮದ ನಿಯೋಜಿತ ಅಧ್ಯಕ್ಷ ರಾಮಪ್ಪ, ಇಂದಿರಾಗಾಂಧಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರವಿ ಮಂಚೇಗೌಡನ ಕೊಪ್ಪಲು, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಲತಾ ಚಿಕ್ಕಣ್ಣ, ಮಾಜಿ ಮೇಯರ್‌ಗಳಾದ ಟಿ.ಬಿ.ಚಿಕ್ಕಣ್ಣ, ಮೋದಾಮಣಿ, ಚಾಮರಾಜ ಕ್ಷೇತ್ರದ ಸ್ಥಳೀಯ ಮುಖಂಡರು ಪಾಲ್ಗೊಂಡಿದ್ದರು.