ಮತಗಳ್ಳತನ ನಡೆಸುತ್ತಿದೆ ಬಿಜೆಪಿ

nrp congg abiyana
ಮುತ್ತಿನಕೊಪ್ಪದಲ್ಲಿ ಮತಗಳ್ಳತನದ ವಿರುದ್ಧ ಸಹಿ ಸಂಗ್ರಹ ಅಭಿಯಾನ ನಡೆಸಲಾಯಿತು. ಡಾ. ಕೆ.ಪಿ.ಅಂಶಮಂತ್, ನರೇಂದ್ರ, ಶ್ರೀಪಾಲ್, ಶಫೀರ್ ಇತರರಿದ್ದರು.
Published on

ಎನ್.ಆರ್.ಪುರ: ಬಿಹಾರದಲ್ಲಿ ಬಿಜೆಪಿ ಸಂವಿಧಾನ ಬಾಹಿರವಾಗಿ, ಅಲ್ಪಸಂಖ್ಯಾತರು, ದಲಿತರ 65 ಲಕ್ಷ ಮತದಾರರನ್ನು ಮತದಾನ ಪಟ್ಟಿಯಿಂದ ತೆಗೆದು ಹಾಕಿತ್ತು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಕೆ.ಪಿ.ಅಂಶಮಂತ್ ಆರೋಪಿಸಿದರು.

ಮುತ್ತಿನಕೊಪ್ಪದಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮತಗಳ್ಳತನದ ವಿರುದ್ಧ ರಾಹುಲ್ ಗಾಂಧಿ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲವಾಗಿ ನಡೆದ ಸಹಿ ಸಂಗ್ರಹ ಅಭಿಯಾನದಲ್ಲಿ ಮಾತನಾಡಿ, ಬಿಹಾರದಲ್ಲಿ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಹೋರಾಟದ ಫಲವಾಗಿ ಮತ್ತೆ ವಾಪಸ್ 38 ಲಕ್ಷ ದಲಿತರ, ಅಲ್ಪಸಂಖ್ಯಾತರ ಹೆಸರನ್ನು ಮತಪಟ್ಟಿಗೆ ಸೇರಿಸಲಾಗಿದೆ. ಅನೇಕ ರಾಜ್ಯಗಳಲ್ಲಿ ಜೀವಂತ ಇರುವವರನ್ನು ಮೃತಪಟ್ಟಿದ್ದಾರೆ ಎಂದು ಹೇಳಿ ಮತದಾನ ಪಟ್ಟಿಯಿಂದ ಹೆಸರು ತೆಗೆಸಿದ್ದಾರೆ ಎಂದು ದೂರಿದರು.

ಡಾ. ಅಂಬೇಡ್ಕರ್ ಸಂವಿಧಾನ ರಚಿಸಿ ಭಾರತ ದೇಶದ ಎಲ್ಲರಿಗೂ ಮತದಾನದ ಹಕ್ಕು ನೀಡಿದ್ದಾರೆ. ಆದರೆ ಬಿಜೆಪಿ ನಾಯಕರು ಸಂವಿಧಾನ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಯಾತ್ರೆ ನಡೆಸಿ ಜನರ ನಾಡಿಮಿಡಿತ ಅರಿತಿದ್ದರು. ರಾಹುಲ್ ಗಾಂಧಿ ಜತೆ ಯುವಜನರು ಬರುತ್ತಿರುವುದನ್ನು ಅರಿತ ಬಿಜೆಪಿ ನಾಯಕರು ಪಕ್ಷಕ್ಕೆ ಸೋಲು ನಿಶ್ಚಿತ ಎಂದು ಗೊತ್ತಾದ ಕೂಡಲೇ ಮತಗಳ್ಳತನ ಮಾಡಿದ್ದಾರೆ. ಒಂದೂವರೆ ತಿಂಗಳಿಂದ ರಾಹುಲ್ ಗಾಂಧಿ ಅವರು ದಾಖಲೆ ಸಮೇತ ಮತಗಳ್ಳತನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಇದಕ್ಕೆ ಬೆಂಬಲವಾಗಿ ಜಿಲ್ಲೆಯ ಎಲ್ಲ ಬ್ಲಾಕ್ ಕಾಂಗ್ರೆಸ್, ಗ್ರಾಮ ಪಂಚಾಯಿತಿಗಳಲ್ಲೂ ಮತಗಳ್ಳತನದ ವಿರುದ್ಧ ಜಾಗೃತಿ ಅಭಿಯಾನ, ಸಹಿ ಸಂಗ್ರಹ ಮಾಡುತ್ತಿದ್ದೇವೆ ಎಂದರು.

11 ವರ್ಷದಿಂದ ದೇಶದಲ್ಲಿ ಬಿಜೆಪಿ ದುರಾಡಳಿತ ಮಾಡುತ್ತಿದೆ. ಜನರ ಮೇಲೆ ಅವೈಜ್ಞಾನಿಕ ಜಿಎಸ್‌ಟಿ ವಿಧಿಸಿ ಹಣ ವಸೂಲಾತಿ ಮಾಡಿದರು. ಹೊಸ ಹೊಸ ಕಾನೂನು ಜಾರಿಗೊಳಿಸಿ ರೈತರಿಗೆ, ಮಹಿಳೆಯರಿಗೆ ತೊಂದರೆ ನೀಡುತ್ತಿದ್ದಾರೆ. ಮಣಿಪುರದಲ್ಲಿ ಹೋರಾಟ ನಡೆದು ಹತ್ತಾರು ಜೀವ ಬಲಿಯಾದರೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅಲ್ಲಿಗೆ ಭೇಟಿ ನೀಡಲಿಲ್ಲ. ಕಳೆದ ವಾರ ಸುಪ್ರೀಂ ಕೋರ್ಟ್‌ನಲ್ಲೂ ವಕೀಲರೊಬ್ಬರು ನ್ಯಾಯಾಧೀಶರಿಗೆ ಅಪಮಾನ ಮಾಡಿ ದೇಶದ ನ್ಯಾಯಾಂಗ ವ್ಯವಸ್ಥೆಗೆ ಕಳಂಕ ತಂದಿದ್ದರೂ ಕೇಂದ್ರ ಸರ್ಕಾರ ಇನ್ನೂ ಕಾನೂನು ಕ್ರಮ ಕೈಗೊಂಡಿಲ್ಲ ಎಂದು ಟೀಕಿಸಿದರು.

ಮುತ್ತಿನಕೊಪ್ಪ ಗ್ರಾಪಂ ಮಟ್ಟದ ಕಾಂಗ್ರೆಸ್ ಅಧ್ಯಕ್ಷ ನರೇಂದ್ರ, ಮುಖಂಡರಾದ ಯೋಗೀಶ್, ಶ್ರೀಪಾಲ್, ದೇವಂತಗೌಡ, ಬಿ.ಎಸ್.ಸುಬ್ರಹ್ಮಣ್ಯ, ಶಫೀರ್, ಗ್ರಾಪಂ ಸದಸ್ಯರು, ಕಾರ್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net