ಮತಕ್ಕಾಗಿ ದಲಿತರ ಒಡೆಯುವ ಯತ್ನ: ವಿ.ಶ್ರೀನಿವಾಸಪ್ರಸಾದ್ ಬೇಸರ

5
Published on

ಮೈಸೂರು: ಒಳಮೀಸಲಾತಿ ಮುನ್ನೆಲೆಗೆ ತರುವ ಮೂಲಕ ಮತಕ್ಕಾಗಿ ದಲಿತರನ್ನು ಒಡೆಯಲಾಗುತ್ತಿದೆ. ಇದು ಬ್ರಿಟಿಷರ ಒಡೆದಾಳುವ ನೀತಿಗಿಂತಲೂ ಅಪಾಯಕಾರಿ ಎಂದು ಚಾಮರಾಜನಗರ ಸಂಸದ ವಿ.ಶ್ರೀನಿವಾಸಪ್ರಸಾದ್ ಬೇಸರ ವ್ಯಕ್ತಪಡಿಸಿದರು.
ಸಮಾನತೆ, ಸ್ವಾಭಿಮಾನ, ಸ್ವಾವಲಂಬನೆ ಪ್ರತಿಷ್ಠಾನ ಹಾಗೂ ಸಮಾನತೆ ಪ್ರಕಾಶನದಿಂದ ಕಲಾಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯದ ಕುಲಪತಿಯಾಗಿ ಅಧಿಕಾರ ಸ್ವೀಕರಿಸಿರುವ ಪ್ರೊ.ಸಿ. ಬಸವರಾಜು ಹಾಗೂ ಮುಕ್ತ ವಿವಿಯಿಂದ ಪಿಎಚ್.ಡಿ ಪದವಿ ಪಡೆದ ಡಾ.ಕಲ್ಯಾಣಸಿರಿ ಭಂತೇಜಿ ಅವರ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಚುನಾವಣೆ ಹತ್ತಿರವಾಗುತ್ತಿರುವಂತೆಯೇ ಮತಕ್ಕಾಗಿ ಒಳ ಮೀಸಲಾತಿ ಚರ್ಚೆ ಮುನ್ನೆಲೆಗೆ ಬಂದಿದೆ. ಎಡಗೈ, ಬಲಗೈ ಎಂದು ಒಡಕುಂಟು ಮಾಡಲಾಗುತ್ತಿದೆ. ಈ ನಡುವೆಯೂ ಮತ್ತೆ ಸಮಾಜ ಹಿಂದಕ್ಕೆ ಹೋಗುವ ಚಲನೆಯಂತಿದೆ ಎಂದರು.
ಮತಕ್ಕೋಸ್ಕರ, ಜನರನ್ನು ಆಕರ್ಷಿಸಲು ಅಸ್ಪಶ್ಯತೆ ನಿವಾರಣೆಯ ಮಾತುಗಳು ಕೇಳಿಬರುತ್ತಿವೆ. ಇದರಿಂದ ಸಮಾಜ ಬದಲಾವಣೆಯಾಗುವುದಿಲ್ಲ. ಈ ನಿಟ್ಟಿನಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸುತ್ತಿದ್ದೇನೆ. ರಾಜಕಾರಣಿಗಳು ಮತಕ್ಕಾಗಿ ಬ್ರಿಟಿಷರಿಗಿಂತಲೂ ಅಪಾಯಕಾರಿಯಾಗಿ ದಲಿತರನ್ನು ಒಡೆಯುತ್ತಿದ್ದಾರೆ ಎಂದರು.
ದೇಶದಲ್ಲಿ ದಲಿತರ ಸ್ಥಿತಿ ಬದಲಾಗಿಲ್ಲ. ನಗರಗಳಲ್ಲಿ ದಲಿತರು ಸ್ಲಂಗಳಲ್ಲಿ ಜೀವನ ನಡೆಸುತ್ತಿದ್ದರೆ ಈಗಲೂ ಹಳ್ಳಿಗಳಲ್ಲಿ ಪ್ರತ್ಯೇಕ ಕಾಲನಿಗಳಿವೆ. ದಲಿತರ ಸ್ಥಿತಿಗತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರ ಗಮನಕ್ಕೆ ತಂದಿರುವೆ. ಶಿಕ್ಷಣ, ಸಂಪತ್ತು, ಅಧಿಕಾರ ಇಲ್ಲದ ಈ ಸಮೂಹವನ್ನು ಯಾವ ರೀತಿ ಮುನ್ನೆಲೆಗೆ ತರಬೇಕು ಎಂಬುದರ ಕುರಿತು ಚರ್ಚಿಸಿದ್ದೇನೆ ಎಂದು ಹೇಳಿದರು.
ಹಿಂದು ಧರ್ಮ ಒಪ್ಪಿಕೊಳ್ಳುವುದೆಂದರೆ ಅಸಮಾನತೆ ಒಪ್ಪಿಕೊಂಡಂತೆ. ಜಾತೀಯತೆ, ಅಸ್ಪಶ್ಯತೆ ಹೇಗೆ ನಮ್ಮನ್ನು ಕೊಲ್ಲುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಅಸ್ಪಶ್ಯತೆ ಮಾನಸಿಕ ಕಾಯಿಲೆಯಂತಿದ್ದು, ಅದರಿಂದ ಹೊರಬರಬೇಕು. ಶಾಂತಿ, ನೆಮ್ಮದಿ, ಸಹಬಾಳ್ವೆಗಾಗಿ ಅಂಬೇಡ್ಕರ್ ತೋರಿದ ಬುದ್ಧ ಮಾರ್ಗದಲ್ಲಿ ನಡೆಯಬೇಕು ಎಂದು ಸಲಹೆ ನೀಡಿದರು.
ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಹಿಂದೆ ಒಳ್ಳೆ ಕೆಲಸ ಮಾಡಿದರೆ ಜನರು ಗುರುತಿಸಿ ಗೌರವ ಕೊಡುತ್ತಿದ್ದರು. ಯಾರಾದರೂ ಜೈಲಿಗೆ ಹೋದರೆ ಅಂತಹವರ ಮನೆ ಬಳಿ ಹೋಗಬೇಡ ಎಂದು ಹಿರಿಯರು ಬುದ್ಧಿ ಹೇಳುತ್ತಿದ್ದರು. ಆದರೆ, ಈಗ ಜೈಲಿಗೆ ಹೋಗಿ ಬಂದವರಿಗೆ ಹೂ ಹಾರ ಹಾಕಿ, ಜೈಕಾರ ಕೂಗುತ್ತಿದ್ದಾರೆ. ಇದನ್ನು ಪ್ರಶ್ನಿಸಿದರೆ ಗಾಂಧಿ ಜೈಲಿಗೆ ಹೋಗಿರಲಿಲ್ಲವೇ ಎಂದು ಪ್ರಶ್ನಿಸುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಬೆಂಗಳೂರಿನ ಮಹಾಬೋಧಿ ಸೊಸೈಟಿ ಪ್ರಧಾನ ಕಾರ್ಯದರ್ಶಿ ಆನಂದ ಭಂತೇಜಿ ಮಾತನಾಡಿ, ಸಮಾಜದ ಬೆಳವಣಿಗೆಗೆ ಮಾನವೀಯತೆ ಮತ್ತು ತೃಪ್ತಿಯ ಮನಸ್ಸುಗಳನ್ನು ಬೆಳೆಸಬೇಕಾಗಿದೆ. ಮನಸ್ಸಿನಲ್ಲಿ ಎಲ್ಲರಿಗೂ ಒಂದೇ ರೀತಿ, ಪ್ರೀತಿ, ಮೈತ್ರಿ, ಗೌರವ ಇರಬೇಕು. ಬುದ್ಧರು 2600 ವರ್ಷಗಳ ಹಿಂದೆ ಅಸಮಾನತೆ ಖಂಡಿಸಿದರು. ಸ್ವಾಭಿಮಾನವಾಗಿ ಬದುಕಲೆಂದು ಪಂಚಶೀಲ ಪಾಲನೆಗೆ ಕರೆಕೊಟ್ಟರು. ಆದರೆ ಈಗ ಮನಸ್ಸು ಕೆಡಿಸುವ ಅನೇಕ ಚಟುವಟಿಕೆಗಳಿಗೆ ಒತ್ತು ಕೊಡುತ್ತಿದ್ದೇವೆ. ಇದರಿಂದ ಹೊರ ಬರಬೇಕು ಎಂದು ಆಶಿಸಿದರು.
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಸಿ.ಬಸವರಾಜು, ವಿಶ್ವಮೈತ್ರಿ ಬುದ್ಧವಿಹಾರ ಡಾ.ಕಲ್ಯಾಣಸಿರಿ ಭಂತೇಜಿ ಅವರನ್ನು ಅಭಿನಂದಿಸಲಾಯಿತು. ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ.ನೀಲಗಿರಿ ತಳವಾರ ಅವರು ಅಭಿನಂದನೆ ನುಡಿಗಳನ್ನಾಡಿದರು. ಬೋಧಿರತ್ನ ಭಂತೇಜಿ, ಆಯೋಜಕರಾದ ಭರತ್ ರಾಮಸ್ವಾಮಿ, ಡಾ.ಮುಳ್ಳೂರು ನಂಜುಂಡಸ್ವಾಮಿ, ಪಿ.ನಂದಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net