

ವಿಜಯವಾಣಿ ಸುದ್ದಿಜಾಲ ದೇವನಹಳ್ಳಿ
ಬೇರೆ ಕಡೆಯಿಂದ ಬಂದು ಇಲ್ಲಿ ಮತ ಖರೀದಿಸಲು ಮುಂದಾಗುವವರನ್ನು ಹೊರಗಿಟ್ಟು ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಕರೆ ನೀಡಿದರು.
ದೇವನಹಳ್ಳಿ ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ಜೆಡಿಎಸ್ ಅಭ್ಯರ್ಥಿ ನಿಸರ್ಗ ನಾರಾಯಣಸ್ವಾಮಿ ಪರ ಪ್ರಚಾರ ಭಾಷಣ ಮಾಡಿ ಮಾತನಾಡಿದರು. ನನ್ನ 90ನೇ ವಯಸ್ಸಿಗೆ ಬಹಳಷ್ಟು ಶಾಸಕರನ್ನು ನೋಡಿದ್ದೇನೆ. ಕೋವಿಡ್ ಸಂದರ್ಭದಲ್ಲಿ ಆಪರೇಷನ್ ಕಮಲಕ್ಕೆ ಅವರು ಎಷ್ಟೇ ಆಮಿಷ ಒಡ್ಡಿದರೂ ಅದಕ್ಕೆ ಅವಕಾಶ ಕೊಡದೇ ಪಕ್ಷ ನಿಷ್ಠೆ ತೋರಿದ ಶಾಸಕ ನಿಸರ್ಗ ನಾರಾಯಣಸ್ವಾಮಿ ಈ ಕ್ಷೇತ್ರದಲ್ಲಿ ಮಾಡಿರುವ ಕೆಲಸ ನಿಮ್ಮೆಲ್ಲರ ವಿಶ್ವಾಸಗಳಿಸಿದೆ ಎಂದರು. ನಮ್ಮದು ರೈತರ ಪಕ್ಷ, ಪಂಜಾಬ್‌ನಲ್ಲಿ ಭತ್ತದ ಒಂದು ತಳಿಗೆ ನನ್ನ ಹೆಸರನ್ನು ಇಟ್ಟಿದ್ದಾರೆ. ಅಲ್ಲಿ ರೈತರಿಗೆ ದೇವೇಗೌಡರು ಹಾಗೂ ಜೆಡಿಎಸ್ ಮೇಲೆ ಅಭಿಮಾನವಿದೆ. ಅದೇ ರೀತಿ ನಮ್ಮ ನಾಡಿನ ಜನ ಪ್ರಾದೇಶಿಕ ಪಕ್ಷಕ್ಕೆ ಒಂದು ಅವಕಾಶ ಮಾಡಿಕೊಟ್ಟರೆ ಈ ನಾಡನ್ನು ಕುಮಾರಸ್ವಾಮಿ ಸುವರ್ಣ ಕರ್ನಾಟಕವನ್ನಾಗಿ ಮಾಡಲಿದ್ದಾರೆ ಎಂದರು.
ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ರಾಜಕೀಯ ಭೀಷ್ಮರಾದ ದೇವೇಗೌಡ ಹಾಗೂ ಕುಮಾರಣ್ಣನ ಮಾತನ್ನು ನಾನು ಎಂದೂ ಮೀರಿದವನಲ್ಲ, ನನಗೆ ಅವರ ಮೇಲಿನ ಗೌರವ, ಪಕ್ಷ ನಿಷ್ಠೆ, ನನ್ನ ಕ್ಷೇತ್ರದ ಜನರ ಹಿತಾಸಕ್ತಿಯಷ್ಟೇ ಮುಖ್ಯ, ಉಳಿದದ್ದು ನಗಣ್ಯ ಎಂದರು.