

ಗದಗ: ಗ್ರಾಮ ಪಂಚಾಯಿತಿ ಚುನಾವಣೆಯ ಮತ ಎಣಿಕೆ ಕಾರ್ಯ ವ್ಯವಸ್ಥಿತ ಹಾಗೂ ಪಾರದರ್ಶಕವಾಗಿ ನಡೆಸಬೇಕು ಎಂದು ಜಿಲ್ಲಾಧಿಕಾರಿ ಎಂ. ಸುಂದರೇಶಬಾಬು ಅವರು ಸೂಚಿಸಿದರು.
ಜಿಲ್ಲಾಡಳಿತ ಭವನದ ಮುಖ್ಯ ಸಭಾಂಗಣದಲ್ಲಿ ಗುರುವಾರ ರಿಟರ್ನಿಂಗ್ ಅಧಿಕಾರಿಗಳು, ಮತ ಎಣಿಕೆ ಮೇಲ್ವಿಚಾರಕರು ಹಾಗೂ ಸಹಾಯಕರಿಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಮತ ಎಣಿಕೆ ಕೇಂದ್ರಕ್ಕೆ ಪ್ರವೇಶಿಸುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಪರಸ್ಪರ ಅಂತರ ಕಾಯ್ದುಕೊಳ್ಳಬೇಕು ಎಂದರು.
ಮತ ಎಣಿಕೆ ಕಾರ್ಯ ಕುರಿತ ನಿಯಮಗಳನ್ನು ತರಬೇತಿಯಲ್ಲಿ ತಿಳಿಸಿಕೊಡಲಾಗುತ್ತದೆ. ಆತಂಕಕ್ಕೆ ಒಳಗಾಗದೇ ಪಾರದರ್ಶಕವಾಗಿ ಕೆಲಸ ಮಾಡಬೇಕು. ಫಲಿತಾಂಶ ಘೊಷಿಸುವ ಬಗ್ಗೆ ಇರುವ ಸಂದೇಹಗಳನ್ನು ತರಬೇತಿಯಲ್ಲಿ ಪರಿಹರಿಸಿಕೊಳ್ಳಬೇಕು ಎಂದರು.
ಪ್ರತಿ ಕೇಂದ್ರದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಯೊಬ್ಬರನ್ನು ನೋಡೆಲ್ ಅಧಿಕಾರಿಯೆಂದು ನಿಯೋಜಿಸಲಾಗುತ್ತಿದೆ. ಅಲ್ಲದೆ, ತಹಸೀಲ್ದಾರ್ ಹಾಜರಿದ್ದು ನಿಗಾ ವಹಿಸಲಿದ್ದಾರೆ ಎಂದರು. ಅಪರ ಜಿಲ್ಲಾಧಿಕಾರಿ ಎಂ. ಸತೀಶಕುಮಾರ ಮಾತನಾಡಿ, ಮತ ಎಣಿಕೆ ಕಾರ್ಯವನ್ನು ತುಂಬಾ ಎಚ್ಚರಿಕೆಯಿಂದ ನಿರ್ವಹಿಸಬೇಕು. ಗ್ರಾಮ ಪಂಚಾಯಿತಿ ಚುನಾವಣೆಯ ಪ್ರತಿ ಮತವೂ ಸಹ ಮಹತ್ವದ್ದಾಗಿರುತ್ತದೆ. ಅಧಿಕಾರಿಗಳು ನಿಷ್ಪಕ್ಷ ಪಾತವಾಗಿ ಕರ್ತವ್ಯನಿರ್ವಹಿಸಬೇಕು ಎಂದರು.
ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ ಮಾತನಾಡಿ, ಮತ ಎಣಿಕಾ ಕಾರ್ಯದಲ್ಲಿ ಸಿಂಧು, ಅಸಿಂಧು ಮತಗಳು ನಿರ್ಣಾಯಕವಾಗಿರುತ್ತದೆ. ಆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತರಬೇತಿಯಲ್ಲಿಯೇ ಪಡೆದು ಮತ ಎಣಿಕೆ ಪ್ರಕ್ರಿಯೆಯನ್ನು ಸರಿಯಾಗಿ ನಿರ್ವಹಿಸಬೇಕು ಎಂದರು. ತರಬೇತಿ ಕಾರ್ಯದಲ್ಲಿ ಆಯಾ ತಾಲೂಕುಗಳ ತಹಸೀಲ್ದಾರರು, ಭೂ ದಾಖಲೆಗಳ ಉಪನಿರ್ದೇಶಕ ರವಿಕುಮಾರ್ ಇತರರು ಇದ್ದರು.
ಚುನಾವಣೆ ಅಕ್ರಮಕ್ಕೆ ಕಡಿವಾಣ ಹಾಕಿ: ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆ ಜಿಲ್ಲೆಯ ಮುಂಡರಗಿ, ನರಗುಂದ, ರೋಣ, ಗಜೇಂದ್ರಗಡ ತಾಲೂಕುಗಳಲ್ಲಿ ಡಿ. 27ರಂದು ಜರುಗಲಿದೆ. ಚುನಾವಣೆ ಅಕ್ರಮಗಳು ನಡೆಯದಂತೆ ಕರ್ತವ್ಯ ನಿರ್ವಹಿಸಬೇಕು. ಅಭ್ಯರ್ಥಿಗಳು ಕರಪತ್ರದಲ್ಲಿ ರಾಜಕೀಯ ಪಕ್ಷಗಳ ಚಿಹ್ನೆ ಹಾಗೂ ನಾಯಕರ ಭಾವಚಿತ್ರಗಳನ್ನು ಮುದ್ರಿಸದಿರುವಂತೆ ನಿಗಾ ವಹಿಸಬೇಕು. ನೀತಿ ಸಂಹಿತೆ ಉಲ್ಲಂಘನೆಯಂತಹ ಪ್ರಕರಣಗಳು ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಎರಡನೇ ಹಂತದ ಚುನಾವಣೆ ಜರುಗುವ ತಾಲೂಕುಗಳ ಗ್ರಾಪಂ ವ್ಯಾಪ್ತಿಗಳಲ್ಲಿ ಈಗಾಗಲೇ ಮದ್ಯ ಮಾರಾಟ ನಿಷೇಧಿಸಿ ಪ್ರತಿಬಂಧಕಾಜ್ಞೆ ಆದೇಶವನ್ನು ಹೊರಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಚುನಾವಣೆ ಯಶಸ್ಸಿಗೆ ಶ್ರಮಿಸಿ
ರೋಣ: ಗ್ರಾಮ ಪಂಚಾಯಿತಿ ಚುನಾವಣೆಯನ್ನು ನಿಷ್ಪಕ್ಷಪಾತ ಹಾಗೂ ನ್ಯಾಯಸಮ್ಮತವಾಗಿ ನಡೆಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಗದಗ ಉಪ ವಿಭಾಗಾಧಿಕಾರಿ ರಾಯಪ್ಪ ಹುಣಸಗಿ ಹೇಳಿದರು.
ಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದ ಸಭಾ ಭವನದಲ್ಲಿ ಬುಧವಾರ ಆಯೋಜಿಸಿದ್ದ ಮತಗಟ್ಟೆ ಅಧಿಕಾರಿಗಳು ಹಾಗೂ ಸಹಾಯಕ ಮತಗಟ್ಟೆಯ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ‘ಅಧಿಕಾರಿಗಳು ಹಾಗೂ ಸಿಬ್ಬಂದಿ ಚುನಾವಣೆ ಆಯೋಗದ ನಿರ್ದೇಶನದಂತೆ ಕಾರ್ಯ ನಿರ್ವಹಿಸಬೇಕು. ತಾಲೂಕಿನಲ್ಲಿ ಚುನಾವಣೆಯನ್ನು ಯಶಸ್ವಿಗೊಳಿಸಲು ಎಲ್ಲರೂ ಶ್ರಮಿಸಬೇಕು’ ಎಂದು ಹೇಳಿದರು.
ಮತದಾನ ದಿನದಂದು ಯಾವುದೇ ಆಮಿಷ ಹಾಗೂ ಒತ್ತಡಗಳಿಗೆ ಒಳಗಾಗದೇ ಕಾರ್ಯನಿರ್ವಹಿಸಬೇಕು. ಚುನಾವಣೆ ಪ್ರಕ್ರಿಯೆಗಳ ಕುರಿತು ಸಮಸ್ಯೆಗಳಿದ್ದಲ್ಲಿ ಸಂಬಧಿಸಿದ ಅಧಿಕಾರಿಗಳ ಗಮನಕ್ಕೆ ತರಬೇಕು. ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೇಳಿದರು. ತಹಸೀಲ್ದಾರ್ ಬಿ.ಡಿ. ಕುಂಬಾರ ಇತರರಿದ್ದರು.
ಕಲ್ಲಾನೂರಲ್ಲಿ ಶೇ. 92.38 ಮತದಾನ
ಶಿರಹಟ್ಟಿ: ತಾಲೂಕಿನ 14 ಗ್ರಾಪಂ ಗಳಲ್ಲಿ ಮೊದಲ ಹಂತ ದಲ್ಲಿ 189 ಸದಸ್ಯ ಸ್ಥಾನಗಳಿಗೆ ಒಟ್ಟು ಶೇ. 79.24ರಷ್ಟು ಮತದಾನ ವಾಗಿದೆ. ಗೆಬ್ಬಾಳ ಗ್ರಾಪಂ ವ್ಯಾಪ್ತಿಯ ಕಲ್ಲಾನೂರ ಮತಗಟ್ಟೆ ಕೇಂದ್ರದಲ್ಲಿ ಅತಿಹೆಚ್ಚು ಅಂದರೆ ಶೇ. 92.38ರಷ್ಟು ಮತದಾನವಾದರೆ, ಬೆಳ್ಳಟ್ಟಿ ಮತಗಟ್ಟೆ ಸಂಖ್ಯೆ 12 ರಲ್ಲಿ ಶೇ. 62.68 ಅತಿ ಕಡಿಮೆ ಮತದಾನವಾದ ವರದಿಯಾಗಿದೆ. ಈ ಬಾರಿ ಬೆಳ್ಳಟ್ಟಿ ಸೇರಿದಂತೆ ಹಲವೆಡೆ ಮಾಜಿ ಸದಸ್ಯರೇ ಸ್ಪರ್ಧಿಸಿದ್ದರಿಂದ ಪ್ರತಿಷ್ಠೆಯ ಕಣವಾಗಿದ್ದವು. ಆದರೆ, ಮತದಾರ ಪ್ರಭುಗಳು ಹೊಸ ಮುಖಗಳಿಗೆ ಮಣೆ ಹಾಕುತ್ತಾರೋ? ಇಲ್ಲ ಹಳಬರತ್ತ ಒಲವು ತೋರುತ್ತಾರೆ ಎಂಬುದು ಡಿ. 30ರಂದು ನಡೆಯುವ ಮತ ಎಣಿಕೆಯ ನಂತರ ನಿರ್ಧಾರವಾಗಲಿದೆ. ಯೋಗ್ಯ ಅಭ್ಯರ್ಥಿಗಳನ್ನು ಆಯ್ಮೆ ಮಾಡಿ ಕಣಕ್ಕಿಳಿಸುವ ಹೊಣೆಯನ್ನು ಆಯಾ ಗ್ರಾಮಗಳ ಮುಖಂಡರಿಗೆ ವಹಿಸಿದ್ದರಿಂದ ಸಮರ್ಥರನ್ನೇ ಸ್ಪರ್ಧೆಗಿಳಿಸಿದ್ದು, ಆಯ್ಕೆ ಖಚಿತ ಎಂದು ಆಯಾ ರಾಷ್ಟ್ರೀಯ ಪಕ್ಷಗಳ ಮುಖಂಡರು ಹೇಳಿಕೊಳ್ಳುತ್ತಿದ್ದಾರೆ.