ಮತ ಎಣಿಕೆ ದಿನ ಪಟಾಕಿ ಸಿಡಿಸಿ ಸಂಭ್ರಮಾಚರಣೆಗೆ ನಿಷೇಧ

ಮತ ಎಣಿಕೆ ದಿನ ಪಟಾಕಿ ಸಿಡಿಸಿ ಸಂಭ್ರಮಾಚರಣೆಗೆ ನಿಷೇಧ
Published on

ಹಾಸನ: ವಿಧಾನಸಭೆ ಚುನಾವಣೆ ಮತ ಎಣಿಕೆ ಕಾರ್ಯವು ನಗರದ ಸರ್ಕಾರಿ ಇಂಜಿನಿಯರ್ ಕಾಲೇಜಿನಲ್ಲಿ ಮೇ 13ರಂದು ನಡೆಯಲಿದೆ. ಚುನಾವಣೆಯಲ್ಲಿ ವಿಜೇತರಾದ ಅಭ್ಯರ್ಥಿಗಳು ಆ ದಿನ ಮತ ಎಣಿಕೆ ಕೇಂದ್ರದ 200 ಮೀಟರ್ ಸುತ್ತಮುತ್ತ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡುವಂತಿಲ್ಲ ಎಂದು ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಎಂ.ಎಸ್ ಅರ್ಚನಾ ಅವರು ಆದೇಶಿಸಿದ್ದಾರೆ.

ವಿಜಯೋತ್ಸವದ ಸಲುವಾಗಿ ಪಟಾಕಿ ಸಿಡಿಸಿ, ಘೋಷಣೆ ಕೂಗಿ ಮೆರವಣಿಗೆ ಮಾಡುತ್ತಾರೆ. ಇದು ಪರಾಭವಗೊಂಡ ಅಭ್ಯರ್ಥಿ ಬೆಂಬಲಿಗರಿಗೂ ಹಾಗೂ ವಿಜೇತ ಅಭ್ಯರ್ಥಿಗಳ ಬೆಂಬಲಿಗರ ನಡುವೆ ಘರ್ಷಣೆಗೆ ಕಾರಣವಾಗಬಹುದು. ಹೀಗಾಗಿ ಮೇ 13ರಂದು ಬೆಳಿಗ್ಗೆ 6 ಗಂಟೆಯಿಂದ ಮೇ 14ರ ಬೆಳಿಗ್ಗೆ 6 ಗಂಟೆಯವರೆಗೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿತಯಿಂದ ನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಮತ ಎಣಿಕೆ ಕೇಂದ್ರದ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇದಾಜ್ಞೆ ಘೋಷಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ನಿಷೇಧಿತ ಪ್ರದೇಶ ಹಾಗೂ ಅವಧಿಯಲ್ಲಿ ಯಾವುದೇ ಬಹಿರಂಗ ಸಭೆ, ಸಮಾರಂಭ, ಜಾತ್ರೆ ಮೆರವಣಿಗೆ ಇತ್ಯಾದಿಗಳನ್ನು ಮಾಡುವುದು, 5 ಜನರಿಗಿಂತ ಹೆಚ್ಚು ಜನರು ಗುಂಪಾಗಿ ಸೇರುವುದು, ಆಯುಧ ಹಾಗೂ ಮಾರಕಾಸ್ತ್ರಗಳನ್ನು ಹಿಡಿದು ಓಡಾಡುವುದಕ್ಕೆ ಅವಕಾಶ ಇರುವುದಿಲ್ಲ ಎಂದು ತಿಳಿಸಲಾಗಿದೆ.

ನಿಷೇಧಿತ ಅವಧಿಯಲ್ಲಿ ವಾಹನಗಳಿಗೆ ಧ್ವನಿವರ್ದಕ ಅಳವಡಿಸಲು ಅವಕಾಶ ಇರುವುದಿಲ್ಲ. ಪಟಾಕಿ ಸಿಡಿಸುವಂತಿಲ್ಲ. ಮತ ಎಣಿಕೆ ದಿನದಂದು ಮತ ಎಣಿಕೆ ಕೇಂದ್ರದ 200 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಧ್ವನಿವರ್ದಕ, ಮೆಗಾಪೋನ್ ಮುಂತಾದುವುಗಳನ್ನು ಬಳಸಿ ಘೋಷಣೆ ಕೂಗುವುದು, ಭಾಷಣ ಮಾಡುವುದು ಮತ್ತು ಅನುಚಿತವಾಗಿ ವರ್ತಿಸುವುದನ್ನು ನಿರ್ಬಂಧಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಆದೇಶಿಸಿದ್ದಾರೆೆ.

ಈ ನಿಷೇದಾಜ್ಞೆಯು ಖಾಸಗಿ ಕಾರ್ಯಕ್ರಮಗಳಾದ ಮದುವೆ, ಗೃಹಪ್ರವೇಶ ಇತರೆ ಕಾರ್ಯಕ್ರಮಗಳಿಗೆ ಅನ್ವಯಿಸುವುದಿಲ್ಲ. ಉಳಿದಂತೆ ನಿಷೆದಾಜ್ಞೆ ಉಲ್ಲಂಘಿಸಿದಲ್ಲಿ ಸಂಬಂಧಪಟ್ಟವರ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net