

ಬೆಳಗಾವಿ: ವಿಧಾನ ಪರಿಷತ್‌ನ ವಾಯವ್ಯ ಪದವೀಧರ ಹಾಗೂ ಶಿಕ್ಷಕರ ಮತಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಮತ ಎಣಿಕೆ ಕೇಂದ್ರ ಹಾಗೂ ಸ್ಟ್ರಾಂಗ್‌ರೂಮ್ ಸ್ಥಾಪನೆಗಾಗಿ ಸಹಾಯಕ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ನಿತೇಶ ಪಾಟೀಲ ಸೋಮವಾರ ಸ್ಥಳ ಪರಿಶೀಲಿಸಿದರು.
ನಗರದ ಜ್ಯೋತಿ ಕಾಲೇಜಿಗೆ ಭೇಟಿ ನೀಡಿ, ಮತ ಎಣಿಕೆ ಕೊಠಡಿಗಳು, ಮತ ಪೆಟ್ಟಿಗೆಗಳನ್ನು ಕಾಯ್ದಿರಿಸುವ ಭದ್ರತಾ ಕೊಠಡಿಗಳ ಸ್ಥಾಪನೆ ಕುರಿತು ಪರಿಶೀಲಿಸಿದರು. ಕಾಲೇಜಿನ ತರಗತಿ ಕೊಠಡಿಗಳನ್ನು ಪರಿಶೀಲಿಸಿದರು. ಚುನಾವಣಾ ಆಯೋಗದ ಮಾರ್ಗಸೂಚಿ ಪ್ರಕಾರ ಮತ ಎಣಿಕೆ ಹಾಗೂ ಭದ್ರತಾ ಕೊಠಡಿ (ಸ್ಟ್ರಾಂಗ್‌ರೂಮ್)ಗಳ ಸ್ಥಾಪಿಸುವ ಕುರಿತು ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದರು. ಪಾರ್ಕಿಂಗ್ ವ್ಯವಸ್ಥೆ, ವಿದ್ಯುತ್ ಸೌಲಭ್ಯ, ಕುಡಿಯುವ ನೀರು ಮತ್ತಿತರ ಮೂಲ ಸೌಕರ್ಯಗಳ ಬಗ್ಗೆ ಮಾಹಿತಿ ಪಡೆದರು. ಕೋವಿಡ್ ನಿಯಮಾವಳಿ ಪಾಲನೆ ಸೇರಿ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಚುನಾವಣಾ ಆಯೋಗಕ್ಕೆ ಪ್ರಸ್ತಾವನೆ ಕಳಿಸಲಾಗುವುದು ಎಂದು ತಿಳಿಸಿದರು.
ಲೋಕೋಪಯೋಗಿ ಇಲಾಖೆಯ ಕಾರ್ಯ ನಿರ್ವಾಹಕ ಇಂಜಿನಿಯರ್ ಸಂಜೀವಕುಮಾರ ಹುಲಕಾಯಿ ಅವರು, ಮತ ಎಣಿಕೆ ಹಾಗೂ ಭದ್ರತಾ ಕೊಠಡಿ (ಸ್ಟ್ರಾಂಗ್ ರೂಮ್) ಸ್ಥಾಪನೆಗೆ ಸಂಬಂಧಿಸಿದಂತೆ ರೂಪುರೇಷೆಗಳ ಕುರಿತು ನಿತೀಶ ಅವರಿಗೆ ವಿವರಿಸಿದರು.ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಉಪ ವಿಭಾ ಗಾಧಿಕಾರಿ ರವೀಂದ್ರ ಕರಲಿಂಗಣ್ಣವರ ಹಾಗೂ ಕಾಲೇಜಿನ ಸಿಬ್ಬಂದಿ ಇದ್ದರು.