

ಡಿಪಿಎನ್ ಶ್ರೇಷ್ಠಿ, ಚಿತ್ರದುರ್ಗ
ಲೋಕಸಭೆ ಚುನಾವಣೆಗೆ ಮತದಾನ ಮುಗಿಯುತ್ತಿದ್ದಂತೆ ಎಣಿಕೆ ಕೇಂದ್ರದ ವಿಳಾಸ, ಎಣಿಕೆ ಆರಂಭ, ಸ್ಟ್ರಾಂಗ್ ರೂಂ ತೆರೆಯುವ ಸಮಯ ಮತ್ತಿತರ ಅಂಶಗಳ ಮಾಹಿತಿಯನ್ನು ಜಿಲ್ಲಾ ಚುನಾವಣಾಧಿಕಾರಿಗಳು ಎಲ್ಲ ಅಭ್ಯರ್ಥಿಗಳಿಗೆ ತಲುಪಿಸಬೇಕಾಗಿದೆ.
ಅಭ್ಯರ್ಥಿಗಳು ಅಥವಾ ಅವರ ಪರ ನೇಮಕವಾಗಿರುವ ಎಲೆಕ್ಷನ್ ಏಜೆಂಟರಿಗೆ ಈ ಬಗೆಗಿನ ತಿಳಿವಳಿಕೆ ಪತ್ರ ತಲುಪಿಸಬೇಕು ಎನ್ನುತ್ತದೆ ಚುನಾವಣೆ ನಡೆಸುವ ನಿಯಮಗಳು 1961 ರ 51ನೇ ನಿಯಮ. ಅದರಂತೆ ಮತದಾನ ಪೂರ್ಣಗೊಂಡ ಕ್ಷೇತ್ರಗಳಿಂದ ಮಾಹಿತಿ ಪತ್ರಗಳು ಅಭ್ಯರ್ಥಿಗಳಿಗೆ ರವಾನೆಯಾಗುತ್ತಿವೆ.
ಅಭ್ಯರ್ಥಿಗಳ ಸಂಖ್ಯೆ ಕಡಿಮೆ ಇರುವ ಕ್ಷೇತ್ರಗಳಲ್ಲಿ ನೋಟಿಸ್ ರವಾನೆ ಸುಲಭವಾದರೂ, ಅತಿ ಹೆಚ್ಚಿನ ಸಂಖ್ಯೆಯಲ್ಲಿರುವ ಕಡೆ ಇದು ಪ್ರಯಾಸದ ಕೆಲಸ. ಏಕೆಂದರೆ ಲೋಕಸಭಾ ಕ್ಷೇತ್ರದಲ್ಲಿ ಅಂತರ್‌ಜಿಲ್ಲಾ, ಅಂತರ್‌ರಾಜ್ಯಗಳ ನಿವಾಸಿಗಳು ಸ್ಪರ್ಧಿಗಳಾಗಿರುತ್ತಾರೆ. ಏಜೆಂಟರನ್ನು ನೇಮಿಸಿಕೊಳ್ಳದ ಅಭ್ಯರ್ಥಿಗಳೂ ಇದ್ದಾರೆ. ಅಂಥವರನ್ನು ಹುಡುಕುವುದು ಇನ್ನೂ ಕಷ್ಟ. ಫೋನ್ ಅಥವಾ ವಾಟ್ಸ್‌ಆ್ಯಪ್ ಮೂಲಕ ತಿಳಿಸಿದರೂ ಲಿಖಿತ ನೋಟಿಸ್ ತಲುಪಿಸಲೇಬೇಕಿದೆ.
ಚಿತ್ರದುರ್ಗದ 20 ಅಭ್ಯರ್ಥಿಗಳ ಪೈಕಿ ಹಲವರು ಬೆಂಗಳೂರು, ಶಿರಾ, ಪಾವಗಡ, ಹಿರಿಯೂರು, ಚಿಕ್ಕಮಗಳೂರಿನವರಿದ್ದಾರೆ. ಚುನಾವಣೆ ಪ್ರಕ್ರಿಯೆ ಮಾಹಿತಿಯನ್ನು ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಅಭ್ಯರ್ಥಿಗಳ ಗಮನಕ್ಕೆ ಕಾಲಕಾಲಕ್ಕೆ ತರಲೇಬೇಕಿದೆ.
247 ಅಭ್ಯರ್ಥಿಗಳು
ಏ.26 ರಂದು ನಡೆದಿದ್ದ 2 ನೇ ಹಂತದಲ್ಲಿ ಕರ್ನಾಟಕದ 14 ಕ್ಷೇತ್ರಗಳಲ್ಲಿ 247 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಬೆಂ.ಗ್ರಾ-15, ಚಿಕ್ಕ ಬಳ್ಳಾಪುರ 29, ಬೆಂ.ಕೇಂದ್ರ-24, ಚಿತ್ರದುರ್ಗ-20, ಮಂಡ್ಯ 15, ಬೆಂ.ಉತ್ತರ 21, ಉಡುಪಿ-ಚಿಕ್ಕಮಗಳೂರು-10, ಹಾಸನ-21, ಬೆಂ.ದಕ್ಷಿಣ 22, ದಕ್ಷಿಣಕನ್ನಡ -9, ಕೋಲಾರ 18, ಚಾಮರಾಜನಗರ 14, ಮೈಸೂರು-18 ಹಾಗೂ ತುಮಕೂರಲ್ಲಿ 18 ಅಭ್ಯರ್ಥಿಗಳಿದ್ದರು, 3 ನೇ ಹಂತದಲ್ಲಿ ಕರ್ನಾಟಕದಲ್ಲಿ ನಡೆಯಲಿರುವ 14 ಕ್ಷೇತ್ರಗಳ ಪೈಕಿ ದಾವಣಗೆರೆಯಲ್ಲಿ 30 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.
ಏಳು ಹಂತದ ಮತದಾನ
ಲೋಕಸಭೆಗೆ ದೇಶಾದ್ಯಂತ 7 ಹಂತಗಳಲ್ಲಿ ಮತದಾನ ನಡೆಯುತ್ತಿದ್ದು, ಏ.19 ರಂದು ಮೊದಲ ಮತ್ತು ಏ.26ರಂದು 2ನೇ ಹಂತದಲ್ಲಿ ಮತದಾನ ಪೂರ್ಣಗೊಂಡಿದೆ. 3 ನೇ ಹಂತದ ಮತದಾನ ಮೇ 7ರಂದು ನಡೆಯಲಿದೆ. 4,5,6 ಮತ್ತು 7ನೇ ಹಂತದ ಮ ತದಾನ ಕ್ರಮವಾಗಿ ಮೇ 13,20,25 ಮತ್ತು ಜೂನ್ 1 ರಂದು ನಡೆಯಲಿದೆ. ಜೂನ್ 4 ರಂದು ಮತ ಎಣಿಕೆ ನಡೆಯಲಿದೆ.
ಕೋಟ್
ಅಭ್ಯರ್ಥಿಗಳಿಗೆ ಮತ ಎಣಿಕೆ ಮಾಹಿತಿಯುಳ್ಳ ನೋಟಿಸ್‌ನ್ನು ಕಡ್ಡಾಯವಾಗಿ ತಲುಪಿಸಬೇಕಿದೆ. ಈ ನಿಟ್ಟಿನಲ್ಲಿ ನಾವು ಜಾರಿ ಮಾಡಿದ ವ ನೋಟಿಸ್ ಅನ್ನು ಸಂಬಂಧಿಸಿದ ತಹಸೀಲ್ದಾರ್‌ಗಳ ಮೂಲಕ ಎಲ್ಲರಿಗೂ ತಲುಪಿಸಿ ಸ್ವೀಕೃತಿ ಪಡೆಯಬೇಕಿದೆ.
ಟಿ.ವೆಂಕಟೇಶ್, ಜಿಲ್ಲಾ ಚುನಾವಣಾಧಿಕಾರಿ, ಚಿತ್ರದುರ್ಗ ಲೋಕಸಭಾ ಕ್ಷೇತ್ರ