ಮತ ಎಣಿಕೆ ಅಧಿಕಾರಿ, ಸಿಬ್ಬಂದಿಗೆ ತರಬೇತಿ

30 Dwd 9
Published on

ಧಾರವಾಡ: ವಿಧಾನ ಪರಿಷತ್ ಪಶ್ಚಿಮ ಪದವೀಧರ ಮತಕ್ಷೇತ್ರದ ಚುನಾವಣೆಯ ಮತ ಏಣಿಕೆ ನ. 2ರಂದು ನಗರದ ಕೃಷಿ ವಿಶ್ವವಿದ್ಯಾಲಯದಲ್ಲಿ ಜರುಗಲಿದೆ. ಮತ ಏಣಿಕೆ ಅಧಿಕಾರಿ ಮತ್ತು ಸಿಬ್ಬಂದಿಗೆ ಕೃಷಿ ವಿಶ್ವವಿದ್ಯಾಲಯದ ರೈತ ಭವನದಲ್ಲಿ ಶುಕ್ರವಾರ ತರಬೇತಿ ಕಾರ್ಯಾಗಾರ ಏರ್ಪಡಿಸಲಾಗಿತ್ತು.

ಅಧ್ಯಕ್ಷತೆ ವಹಿಸಿದ್ದ ಚುನಾವಣಾ ಅಧಿಕಾರಿ ಹಾಗೂ ಬೆಳಗಾವಿ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ಮಾತನಾಡಿ, ಮತ ಎಣಿಕೆಯ ಕಾರ್ಯ ಹಾಗೂ ಮತ ಎಣಿಕಾ ಕೇಂದ್ರದಲ್ಲಿ ಕೈಗೊಂಡಿರುವ ಸಿದ್ಧತೆ, ಸುರಕ್ಷತಾ ಕ್ರಮಗಳ ಕುರಿತು ವಿವರಿಸಿದರು. ಹೆಚ್ಚಿನ ಪ್ರಮಾಣದಲ್ಲಿ ಮತದಾನ ಆಗಿರುವುದರಿಂದ ಎಣಿಕೆಗೆ ಅಗತ್ಯವಿರುವಷ್ಟು ಅಧಿಕಾರಿ ಮತ್ತು ಸಿಬ್ಬಂದಿ ನೇಮಿಸಲಾಗಿದೆ. ಮತ ಎಣಿಕೆಗೆ ಹೆಚ್ಚುವರಿ ಸಮಯ ತಗಲುವುದರಿಂದ ಸಂಯಮದಿಂದ ಕರ್ತವ್ಯ ನಿರ್ವಹಿಸಬೇಕು. ಚುನಾವಣಾ ನಿಯಮಗಳನ್ನು ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿ ಪಾಲಿಸುವುದರೊಂದಿಗೆ ಕೋವಿಡ್ ಸುರಕ್ಷತಾ ನಿಯಮಗಳನ್ನು ಪ್ರತಿಯೊಬ್ಬರೂ ಅನುಸರಿಸಬೇಕು ಎಂದರು.

ರಾಜ್ಯ ಮಟ್ಟದ ಮಾಸ್ಟರ್ ಟ್ರೖೆನರ್ ಆಗಿರುವ ಹಿರಿಯ ತರಬೇತಿದಾರ ಚೊರಗಸ್ತಿ, ಹಿರಿಯ ಕೆಎಎಸ್ ಅಧಿಕಾರಿ ಮಹ್ಮದ ಜುಬೇರ್, ಹಾವೇರಿ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಎಫ್. ಯೋಗೇಶ್ವರ್ ಅವರು ಮತ ಎಣಿಕೆ ಕರ್ತವ್ಯ ನಿರ್ವಹಿಸುವ ಅಧಿಕಾರಿ ಮತ್ತು ಸಿಬ್ಬಂದಿಗೆ ತರಬೇತಿ ನೀಡಿದರು.

ಜಿಲ್ಲಾಧಿಕಾರಿಗಳಾದ ಧಾರವಾಡದ ನಿತೇಶ ಪಾಟೀಲ, ಹಾವೇರಿಯ ಎಸ್.ಬಿ. ಶೆಟ್ಟೆಣ್ಣವರ, ಅಪರ ಪ್ರಾದೇಶಿಕ ಆಯುಕ್ತರಾದ ರಮೇಶ ಕಳಸದ, ನಜ್ಮಾ ಫೀರಜಾದೆ, ಧಾರವಾಡ ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪ ವಿಭಾಗಾಧಿಕಾರಿ ಡಾ. ಬಿ. ಗೋಪಾಲಕೃಷ್ಣ, ಹು-ಧಾ ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ತಹಸೀಲ್ದಾರ್​ರಾದ ಡಾ. ಸಂತೋಷ ಬಿರಾದಾರ, ನವೀನ ಹುಲ್ಲೂರ, ಅಶೋಕ ಶಿಗ್ಗಾಂವಿ ಹಾಗೂ ಮತ ಎಣಿಕೆ ಕರ್ತವ್ಯಕ್ಕೆ ನಿಯೋಜನೆಗೊಂಡ ಅಧಿಕಾರಿ, ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net