ಮಣ್ಣು ಪರೀಕ್ಷೆಯ ನೆಪದಲ್ಲಿ ಅಕ್ರಮ:ವಿವಿಧ ಸಂಘಟನೆಗಳಿಂದ ಪ್ರತಿಭಟನೆ

ಮಣ್ಣು ಪರೀಕ್ಷೆಯ ನೆಪದಲ್ಲಿ ಅಕ್ರಮ:ವಿವಿಧ ಸಂಘಟನೆಗಳಿಂದ ಪ್ರತಿಭಟನೆ
Published on

ಹಾಸನ: ರೈತರ ಜಮೀನಿಗೆ ಭೇಟಿ ನೀಡದೆ ಸುಳ್ಳು ಮಣ್ಣು ಪರೀಕ್ಷೆಯ ಕಾರ್ಡ್‌ಗಳನ್ನು ವಿತರಿಸುವ ಮೂಲಕ ಸರ್ಕಾರಕ್ಕೆ ಮೋಸ ಮಾಡಿರುವ ಜಿಲ್ಲೆಯ ಕೃಷಿ ಇಲಾಖೆ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಮತ್ತು ಇದರ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿ ಮಂಗಳವಾರ ಕೃಷಿ ಇಲಾಖೆಯ ಕಚೇರಿ ಮುಂದೆ ಹಿರಿಯ ನಾಗರಿಕರ ವೇದಿಕೆ ಮತ್ತು ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಪ್ರಗತಿಪರ ಚಿಂತಕ ಹಾಗೂ ರೈತ ಮುಖಂಡ ಮಂಜುನಾಥ ದತ್ತ ಮಾತನಾಡಿ, ಜಿಲ್ಲೆಯಲ್ಲಿ ಕೃಷಿ ಇಲಾಖೆ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಆದರೆ ಇಲಾಖೆಯ ಅಧಿಕಾರಿಗಳು ಅನ್ನದಾತನ ಹೆಸರಿನಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ. ಮಣ್ಣು ಪರೀಕ್ಷೆಯ ನೆಪದಲ್ಲಿ ಅಕ್ರಮ ನಡೆದಿದೆ. ಇದರ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ರೈತ ದೇಶದ ಬೆನ್ನೆಲುಬು ಎಂದು ಪುಂಖಾನುಪುಂಖವಾಗಿ ಭಾಷಣ ಮಾಡುವ ರಾಜಕಾರಣಿಗಳು, ಅವರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಹಿಡಿಯುವಲ್ಲಿ ಮಾತ್ರ ಸಂಪೂರ್ಣ ವಿಫಲರಾಗಿದ್ದಾರೆ. ಮಾಡದ ಕೆಲಸವನ್ನು ಮಾಡಿದ್ದೇವೆ ಎಂದು ಹೇಳುವ ದುಸ್ಥಿತಿಗೆ ಕೃಷಿ ಅಧಿಕಾರಿಗಳು ಬಂದಿರುವುದು ನಿಜಕ್ಕೂ ಶೋಚನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಹಿಂದೆ ಚಳವಳಿಗಳು ಮತ್ತು ಸಂಘಟನೆ ಶಕ್ತಿಯುತವಾಗಿತ್ತು. ಚಂದ್ರಪ್ರಸಾದ್ ತ್ಯಾಗಿಯಂತಹವರು ಪ್ರತಿಭಟನೆ ನಡೆಸಿದರೆ ಅದು ತಾರ್ಕಿಕ ಅಂತ್ಯ ಕಾಣುತ್ತಿತ್ತು. ಆದರೆ ಈಗ ಸಂಘಟನೆಗಳ ಶಕ್ತಿಯೂ ಕಡಿಮೆಯಾಗಿದೆ. ಆದರೆ ಹಿರಿಯ ನಾಗರಿಕರ ವೇದಿಕೆ ರೈತರ ಪರವಾಗಿ ಧ್ವನಿ ಎತ್ತಿ ಪ್ರತಿಭಟನೆ ಮಾಡುತ್ತಿರುವುದು ನಿಜಕ್ಕೂ ಆರೋಗ್ಯಕರ ಬೆಳವಣಿಗೆ. ಇದಕ್ಕೆ ತಾರ್ಕಿಕ ಅಂತ್ಯ ಕಾಣಿಸಬೇಕು ಎಂದರು.

ವಕೀಲರ ಸಂಘದ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ ಮಾತನಾಡಿ, ಕೃಷಿ ಅಧಿಕಾರಿಗಳು ಮಣ್ಣು ಪರೀಕ್ಷೆಗೆ ಅನುಸರಿಸಬೇಕಾದ ಕ್ರಮಗಳನ್ನು ಮಾಡದೆ ಎಲ್ಲವನ್ನೂ ಗಾಳಿಗೆ ತೂರಿ ಲೋಪ ಎಸಗಿದ್ದಾರೆ. ಈ ಬಗ್ಗೆ ಮಾಹಿತಿ ಹಕ್ಕಿನಡಿ ದಾಖಲೆ ಕೇಳಿದರೆ ನಶಿಸಿ ಹೋಗಿವೆ ಎಂದು ಹೇಳುತ್ತಿದ್ದಾರೆ. ಈಗಾಗಲೇ ಅಧಿಕಾರಿಗಳಿಗೆ ಗಡುವು ನೀಡಲಾಗಿದ್ದು, ಅಷ್ಟರೊಳಗೆ ಮಾಹಿತಿ ನೀಡದಿದ್ದರೆ ಕಾನೂನು ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಳ್ಳು ಗೋಪಾಲ್ ಮಾತನಾಡಿ, ಇಂತಹ ಕಡು ಭ್ರಷ್ಟ ಅಧಿಕಾರಿಗಳಿಂದ ರೈತರಿಗೆ ಸಾಕಷ್ಟು ಅನ್ಯಾಯವಾಗುತ್ತಿದ್ದು, ಇದನ್ನು ಪ್ರಶ್ನಿಸಿದರೆ ಅವರಿಂದ ಯಾವುದೇ ಉತ್ತರಗಳಿಲ್ಲ. ಇದೇ ರೀತಿ ಮುಂದುವರಿದರೆ ಅಧಿಕಾರಿಗಳನ್ನು ಕಚೇರಿಯಿಂದ ಹೊರದಬ್ಬಿ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜೆಡಿಎಸ್ ವರಿಷ್ಠ ಹಾಗೂ ಶಾಸಕ ಹೆಚ್.ಡಿ.ರೇವಣ್ಣ ಮಾತನಾಡಿ, ರೈತರ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ. ಹಿರಿಯ ನಾಗರಿಕರ ವೇದಿಕೆ ನಡೆಸುತ್ತಿರುವ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಪ್ರಕಟಿಸಿದರು.

ಈ ಸಂದರ್ಭದಲ್ಲಿ ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಡಾ. ವೈ.ಎಸ್.ವೀರಭದ್ರಪ್ಪ, ಪದಾಧಿಕಾರಿಗಳಾದ ಬಿ.ಕೆ.ಮಂಜುನಾಥ್, ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಅಗಿಲೆ ಯೊಗೀಶ್, ಕಾಂಗ್ರೆಸ್ ಮುಖಂಡ ಬನವಾಸೆ ರಂಗಸ್ವಾಮಿ, ಜೆಡಿಎಸ್ ಮುಖಂಡ ಕೆ.ಎಂ.ರಾಜೇಗೌಡ, ಸಿಐಟಿಯು ಮುಖಂಡ ಧರ್ಮೇಶ್ ಸೇರಿ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net