

ದಾವಣಗೆರೆ: ಮಣ್ಣು, ನೀರು ಮತ್ತು ಮರ ಪ್ರತಿಯೊಬ್ಬರ ಜೀವನದ ಆಧಾರ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಚೇರಿ ದಾವಣಗೆರೆಯ ಪರಿಸರ ಅಧಿಕಾರಿ ಡಾ.ಲಕ್ಷ್ಮೀಕಾಂತ ತಿಳಿಸಿದರು.
ಶ್ರೀ ಅರವಿಂದ ವಿದ್ಯಾಸಂಸ್ಥೆ ಅಡಿಯಲ್ಲಿ ನಡೆಯುತ್ತಿರುವ ಅತ್ತಿಗೆರೆ ಗ್ರಾಮದ ಶ್ರೀಮತಿ ಚನ್ನಪ್ಳ ಶಿವಲಿಂಗಮ್ಮ ಗುರುಬಸಪ್ಪ ಕಲಾ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪರಿಸರ ಉಳಿದರೇನೆ ಮಾನವ-ಪ್ರಾಣಿ-ಪಕ್ಷಿ ಸಂಕುಲದ ಉಳಿವು ಸಾಧ್ಯ. ಹೀಗಾಗಿ ಪರಿಸರ ಕಾಪಾಡಲು ಎಲ್ಲರೂ ಸಹಕರಿಸಬೇಕು. ಗಿಡ-ಮರಗಳನ್ನು ನೆಟ್ಟು ಬೆಳೆಸಬೇಕೆಂದು ಕರೆ ನೀಡಿದರು. ದಾವಣಗೆರೆ ವಿಶ್ವವಿದ್ಯಾಲಯದ ನಿವೃತ್ತ ಕುಲಸಚಿವ ಡಾ.ಎನ್.ಕೆ.ಗೌಡ ಮಾತನಾಡಿ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜತೆ ಕೌಶಲಾಧಾರಿತ ಕಲಿಕೆಗೆ ಒತ್ತು ನೀಡಬೇಕು ಎಂದು ಹೇಳಿದರು.
ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಪ್ರೊ.ಎಚ್. ಚನ್ನಪ್ಪ ಪಲ್ಲಾಗಟ್ಟೆ ಮಾತನಾಡಿ ದಾವಣಗೆರೆ ತಾಲ್ಲೂಕಿನ ಗ್ರಾಮೀಣ ಭಾಗದ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿ.ಯು.ವಿಭಾಗದ ಫಲಿತಾಂಶದಲ್ಲಿ ಮೊದಲ ಸ್ಥಾನ ಕಾಪಾಡಿಕೊಂಡು ಬರುತ್ತಿರುವುದು ಹೆಮ್ಮೆಯ ಸಂಗತಿ ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಮತ್ತು ಕೌಶಲಾಧಾರಿತ ಶಿಕ್ಷಣ ನೀಡುವ ಕುರಿತು ಮಾತನಾಡಿದರು.
ಕಾಲೇಜಿನ ಪ್ರಾಚಾರ್ಯೆ ಎಚ್.ಚಂದ್ರಪ್ಪ ಪ್ರಾಸ್ತಾವಿಕ ಮಾತನಾಡಿದರು. ಉಪನ್ಯಾಸಕ ಸುಭಾಷ ಶಿಂಧೆ ಕಾರ್ಯಕ್ರಮ ನಿರ್ವಹಿಸಿದರು. ಪರಮೇಶ್ವರಪ್ಪ ಎನ್.ಎಸ್.ಸ್ವಾಗತಿಸಿದರೆ, ಬಸವರಾಜಪ್ಪ ಕೆ.ಎಂ.ವಂದಿಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಗುಡ್ಡಪ್ಪ ಓಲೇಕಾರ, ನಾಗವೇಣಿ ಕೆ.ಎನ್., ಸಲ್ಮಾ ಬಿ.ಎಸ್., ಸೌಮ್ಯ, ಶಿವಶಂಕರ್.ಆರ್., ಭೋಜರಾಜಪ್ಪ ಡಿ., ಹಾಜರಿದ್ದರು.