

ಬೆಳಗಾವಿ: ಜಿಲ್ಲಾದ್ಯಂತ ಸಕ್ರಿಯವಾಗಿರುವ ಮರಳು ಮಾಫಿಯಾಕ್ಕೆ ಪರೋಕ್ಷವಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳೇ ಸಾಥ್ ನೀಡುತ್ತಿದ್ದು, ಕೃತಕ ಮರಳು ಅಭಾವ ಸೃಷ್ಟಿಸುವುದರ ಜತೆಗೆ ದಂಧೆಕೋರರ ವಿರುದ್ಧ ಕ್ರಮ ಜರುಗಿಸಲು ಹಿಂದೇಟು ಹಾಕುತ್ತಿದ್ದಾರೆ.
ನದಿದಂಡೆಗಳಲ್ಲಿ ಸಂಗ್ರಹಗೊಳ್ಳುವ ಮಣ್ಣು ತೊಳೆದು ಅದನ್ನೇ ನದಿ ಮರಳು ಎಂದು ಜನರನ್ನು ಮರುಳು ಮಾಡಿ, ವಂಚಿಸುವ ಅಕ್ರಮ ದಂಧೆಕೋರರ ಸಂಖ್ಯೆ ದಿನದಿಂದ ದಿನಕ್ಕೆ ದ್ವಿಗುಣಗೊಳ್ಳುತ್ತಲೇ ಇದೆ. ಜಿಲ್ಲೆಯಲ್ಲಿ ಬೇಡಿಕೆಗೆ ತಕ್ಕಷ್ಟು ಮರಳು, ಅಧಿಕೃತ ಬ್ಲಾಕ್ ಹಾಗೂ ಪ್ರಾಂಗಣಗಳಿಂದಲೇ ಮಾರಾಟ ಮಾಡಿದರೆ, ತೆರಿಗೆ ಹಾಗೂ ರಾಜಧನ ರೂಪದಲ್ಲಿ ಸರ್ಕಾರದ ಬೊಕ್ಕಸಕ್ಕೆ ತಕ್ಕಮಟ್ಟಿಗೆ ಆದಾಯವಾದರೂ ಬರುತ್ತಿತ್ತು. ಆದರೆ, ಅಕ್ರಮ ಗಣಿಗಾರಿಕೆಯಿಂದಲೇ ಅತ್ಯಧಿಕ ಪ್ರಮಾಣದಲ್ಲಿ ಪೂರೈಕೆ ಆಗುತ್ತಿರುವುದರಿಂದ ಸರ್ಕಾರದ ಬೊಕ್ಕಸಕ್ಕೂ
ಕೊಕ್ಕೆ ಬೀಳುತ್ತಿದೆ.
ನದಿಗಳ ದಂಡೆ ಹಾಗೂ ಜಲಾಶಯಗಳ ಹಿನ್ನೀರಿನ ಪಾತ್ರದ ಪ್ರದೇಶದಲ್ಲಿನ ಶೇಖರಣೆಗೊಳ್ಳುವ ಮರಳು ಮಿಶ್ರಿತ ಮಣ್ಣನ್ನೇ ಲಾರಿ, ಟ್ರಾೃಕ್ಟರ್ ಹಾಗೂ ಟಿಪ್ಪರ್‌ಗಳಲ್ಲಿ ತುಂಬುತ್ತಾರೆ. ಅದೇ ವಾಹನಗಳಲ್ಲಿ ತೊಳೆದು, ಅದನ್ನೇ ಮರಳು ರೂಪದಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ದಂಧೆ ಜಿಲ್ಲೆಯ ಮೂಲೆ ಮೂಲೆಗಳಲ್ಲೂ ನಡೆಯುತ್ತಿದ್ದು, ಹಿಡಕಲ್ ಜಲಾಶಯ ಹಿನ್ನೀರಿನ ಪ್ರದೇಶ ಜಿನರಾಳ, ಯಮಕನಮರಡಿ ಹಾಗೂ ಚಿಕ್ಕೋಡಿ, ಖಾನಾಪುರ ಮತ್ತು ಗೋಕಾಕ ತಾಲೂಕಿನಲ್ಲಿ ವ್ಯಾಪಕವಾಗಿ ನಡೆಯುತ್ತಿದೆ. ಯಾವುದೇ ಪರ್ಮಿಟ್ ಇಲ್ಲದೆ ರಾಜಾರೋಷವಾಗಿ ಮರಳು ಸಾಗಣೆಯಲ್ಲಿ ತೊಡಗಿದ್ದಾರೆ. ಆದರೆ, ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಈ ಬಗ್ಗೆ ತಲೆಕೆಡಿಸಿಕೊಳ್ಳದೆ ಮೌನವಹಿಸಿರುವುದು ಅನುಮಾನಗಳನ್ನು ಮತ್ತಷ್ಟು ದಟ್ಟವಾಗಿಸಿದೆ.
ಜಿನರಾಳ ಜನರ ಅಸಮಾಧಾನ: ಜಿನರಾಳ ಹಾಗೂ ಯಮಕನಮರಡಿ ವ್ಯಾಪ್ತಿಯಲ್ಲಿ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಗಣಿಗಾರಿಕೆಯನ್ನು ಸ್ಥಳೀಯರೇ ವಿರೋಧಿಸಿ, ಟಿಪ್ಪರ್ ಹಾಗೂ ಜೆಸಿಬಿಗಳನ್ನು ವಾಪಸ್ ಕಳುಹಿಸಿದ್ದರು. ಆದರೆ, ದಂಧೆಕೋರರು ಮತ್ತೆರಡು ದಿನ ಬಿಟ್ಟು ಅದೇ ಅಕ್ರಮದಲ್ಲಿ ತೊಡಗಿದ್ದಾರೆ. ಈ ಬಗ್ಗೆ ‘ವಿಜಯವಾಣಿ’ ಜತೆ ಮಾತನಾಡಿದ ಜಿನರಾಳ ಗ್ರಾಮದ ಹಲವು ನಿವಾಸಿಗಳು, ನೀರಾವರಿ ಇಲಾಖೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಮೌಖಿಕ ದೂರು ನೀಡಿದರೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೃತಕ ಅಭಾವ ಸೃಷ್ಟಿ: ಸರ್ಕಾರದ ವಿವಿಧ ಇಲಾಖೆಗಳ ಕಚೇರಿ ಕಟ್ಟಡ, ಚರಂಡಿ ಹಾಗೂ ರಸ್ತೆ ನಿರ್ಮಾಣ ಕಾಮಗಾರಿಗಳು ಮಾತ್ರವಲ್ಲದೆ, ಸಾವಿರಾರು ಸಂಖ್ಯೆಯಲ್ಲಿ ನೆರೆ ಸಂತ್ರಸ್ತರು ಮನೆ ನಿರ್ಮಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಸುಮಾರು 3 ದಶಲಕ್ಷ ಮೆಟ್ರಿಕ್ ಟನ್‌ನಷ್ಟು ಮರಳು ಬೇಡಿಕೆ ಇದೆ. ಆದರೆ, ಎಂ-ಸ್ಯಾಂಡ್ ಘಟಕಗಳು, ಗುತ್ತಿಗೆ ಮಂಜೂರಾದ ಮರಳು
ಬ್ಲಾಕ್‌ಗಳು ಮತ್ತು ಪಟ್ಟಾ ಜಮೀನಿನಲ್ಲಿ ಮಂಜೂರಾದ ಗಣಿಗಾರಿಕೆ ಪರವಾನಗಿ ಪಡೆದ ಪ್ರದೇಶಗಳಿಂದ 2 ದಶಲಕ್ಷ ಮೆಟ್ರಿಕ್‌ನಷ್ಟು ಪೂರೈಸುವುದೇ ಸವಾಲು ಎಂಬಂತಾಗಿದೆ. ಇದರಿಂದಾಗಿ ನಿರ್ಮಾಣ ಕೆಲಸಕ್ಕೆ ಈ ಅಕ್ರಮ ದಂಧೆಕೋರರನ್ನೇ ಅವಲಂಬಿಸುವಂತಾಗಿದೆ.
ನದಿ ಮರಳಿಗಿಂತ ಎಂ-ಸ್ಯಾಂಡ್ ಉತ್ತಮ ಗುಣಮಟ್ಟದ್ದಾಗಿದೆ. ಹೀಗಾಗಿ ಎಂ- ಸ್ಯಾಂಡ್‌ಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. 27 ಎಂ-ಸ್ಯಾಂಡ್ ಘಟಕಗಳ ಮೂಲಕ ಅಗತ್ಯಕ್ಕೆ ತಕ್ಕಂತೆ ಪೂರೈಕೆ ಮಾಡಲಾಗುತ್ತಿದೆ. ಇನ್ನು ಜಿಲ್ಲೆಯಲ್ಲಿನ ನಾಲ್ಕು ಮರಳು ಬ್ಲಾಕ್‌ಗಳ ಪೈಕಿ, ಮೂರು ಸ್ಥಗಿತಗೊಂಡಿದ್ದು, ರಾಮದುರ್ಗದ ಬ್ಲಾಕ್‌ನಿಂದ ಮಾತ್ರ ಪ್ರತಿದಿನ 3ರಿಂದ 4 ವಾಹನಗಳಿಗೆ ಮಾತ್ರ ಪರ್ಮಿಟ್ ನೀಡಲಾಗುತ್ತಿದೆ.| ಲೋಕೇಶಕುಮಾರ್ ಜಿ.ಎನ್. ಉಪ ನಿರ್ದೇಶಕ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಬೆಳಗಾವಿ
| ರವಿ ಗೋಸಾವಿ ಬೆಳಗಾವಿ