ಮಣ್ಣು ತೆಗೆಯದಿದ್ದರೆ ನೆರೆ ಭೀತಿ

30KWR1
Published on

ಅಂಕೋಲಾ/ಕಾರವಾರ: ವಿಧಾನಸಭೆ ಕ್ಷೇತ್ರದ ಎರಡು ಪ್ರಮುಖ ಸೇತುವೆ ಕಾಮಗಾರಿಗಳು ಅರೆಬರೆಯಾಗಿವೆ. ಬ್ರಿಜ್ ಕಟ್ಟಲು ನದಿಯಲ್ಲಿ ತುಂಬಿದ ಮಣ್ಣನ್ನು ಶೀಘ್ರ ತೆರವು ಮಾಡದಿದ್ದಲ್ಲಿ ಈ ಮಳೆಗಾಲದಲ್ಲಿ ಸುತ್ತಲಿನ ಗ್ರಾಮಗಳಿಗೆ ನೀರು ತುಂಬುವ ಆತಂಕವಿದೆ.

ಕಾರವಾರ ತಾಲೂಕಿನಲ್ಲಿ ಕಾಳಿ ನದಿಗೆ ಅಡ್ಡವಾಗಿ ಕಟ್ಟುತ್ತಿರುವ ಕೆರವಡಿ- ಉಳಗಾ ಸೇತುವೆ ಕಾಮಗಾರಿ ಆರು ತಿಂಗಳಿಂದ ನಿಂತಿದೆ. ಅಂಕೋಲಾ ತಾಲೂಕಿನ ಗಂಗಾವಳಿ ನದಿಗೆ ಅಡ್ಡವಾಗಿ ನಿರ್ವಿುಸುತ್ತಿರುವ ಮಂಜಗುಣಿ- ಗಂಗಾವಳಿ ಸೇತುವೆ ಕಾಮಗಾರಿ ಭರದಿಂದ ಸಾಗಿದೆ.

ಹರಿಯುವ ನೀರಿನ ನಡುವೆ ಬೃಹತ್ ಕಂಬಗಳನ್ನು ಏಳಿಸಲು ಎರಡೂ ನದಿಗಳಿಗೆ ಮುಕ್ಕಾಲು ಭಾಗ ಮಣ್ಣು ತುಂಬಿ ನೀರಿನ ಹರಿವನ್ನು ತಡೆಹಿಡಿಯಲಾಗಿದೆ. ಬೇಸಿಗೆಯಲ್ಲಿ ಇದರಿಂದ ಯಾವುದೇ ತೊಂದರೆ ಇಲ್ಲ. ಆದರೆ, ಮಳೆಗಾಲದಲ್ಲಿ ನೀರು ನಿಂತು ಸೇತುವೆ ನಿರ್ಮಾಣ ಸ್ಥಳದ ಹಿಂದಿನ ಗ್ರಾಮಗಳಿಗೆ ನುಗ್ಗಿ ಹಾನಿಯಾಗುವ ಆತಂಕವಿದೆ. ಕಳೆದ ಮಳೆಗಾಲದಲ್ಲಿ ಎರಡೂ ನದಿಗಳಿಂದ ಭಾರಿ ಪ್ರವಾಹ ಉಂಟಾಗಿ ಜನ ತಲ್ಲಣಗೊಂಡಿದ್ದು, ಈ ಬಾರಿ ಮತ್ತಷ್ಟು ಹೆದರಲು ಕಾರಣವಾಗಿದೆ.

ವಿಳಂಬ: ಇವೆರಡೂ ಸೇತುವೆ ಕಾಮಗಾರಿಗಳು ಪೂರ್ಣವಾದರೆ ಸಾವಿರಾರು ಜನರಿಗೆ ಅನುಕೂಲವಾಗಲಿದೆ. ಪ್ರಮುಖ ಊರುಗಳ ನಡುವಿನ ಸಂಚಾರದ ಅಂತರ ಕಡಿಮೆಯಾಗಲಿದೆ. ಆದರೆ, ಆಡಳಿತದ ವಿಳಂಬದಿಂದ ಕಾಮಗಾರಿ ನಿಗದಿತ ಅವಧಿಗೆ ಮುಕ್ತಾಯವಾಗದೇ ಕುಂಟುತ್ತ ಸಾಗಿದೆ. ಇದರಿಂದ ಜನ ಈಗ ಆತಂಕದಲ್ಲಿ ದಿನ ಕಳೆಯುವಂತಾಗಿದೆ.

2018ರಲ್ಲಿ ಮಂಜೂರಾದ ಎರಡೂ ಸೇತುವೆ ಕಾಮಗಾರಿಯನ್ನು ಕರ್ನಾಟಕ ರೋಡ್ ಡೆವಲಪ್​ವೆುಂಟ್ ಕಾರ್ಪೆರೇಷನ್ ಮೂಲಕ ಕೈಗೊಳ್ಳಲಾಗಿದೆ. ಎರಡೂ ಸೇತುವೆಗಳನ್ನು ಡಿಆರ್​ಎನ್ ಇನ್​ಫ್ರಾಸ್ಟ್ರಕ್ಚರ್ ಕಂಪನಿ ಗುತ್ತಿಗೆ ಪಡೆದಿದೆ. ಸ್ಟಾರ್ ಇನ್​ಫ್ರಾಸ್ಟ್ರಕ್ಚರ್ ಕಂಪನಿ ಕಾಮಗಾರಿಯ ನಿರ್ವಹಣೆ ಮಾಡುತ್ತಿದೆ.

28.70 ಕೋಟಿ ರೂಪಾಯಿ ವೆಚ್ಚದ ಗಂಗಾವಳಿ- ಮಂಜಗುಣಿ ನಡುವೆ ಒಟ್ಟು 315 ಮೀಟರ್ ಉದ್ದದ ಸೇತುವೆ ಕಾಮಗಾರಿ 2018ರ ಮಾರ್ಚ್​ನಲ್ಲಿ ಪ್ರಾರಂಭವಾಯಿತು. 2019ರ ಮಾರ್ಚ್​ಗೇ ಮುಗಿಯಬೇಕಿತ್ತು. ಕೆರವಡಿ- ಉಳಗಾ ನಡುವೆ 245 ಮೀಟರ್ ಉದ್ದದ ಸೇತುವೆ ಕಾಮಗಾರಿ 2018ರ ಮಾರ್ಚ್​ನಲ್ಲಿ ಪ್ರಾರಂಭವಾಯಿತು. 2019 ಜೂನ್​ನಲ್ಲಿ ಮುಗಿಯಬೇಕಿತ್ತು. ಕೆರವಡಿ ಭಾಗದಿಂದ 3 ಹಾಗೂ ಉಳಗಾ ಭಾಗದಿಂದ 4 ಕಂಬಗಳನ್ನು ನಿರ್ಮಾಣ ಮಾಡಲಾಗಿದೆ. ಇನ್ನು ಒಂದು ಕಂಬ ನಿರ್ವಿುಸುವುದು ಬಾಕಿ ಇದೆ. ಆದರೆ, ಕಂಪನಿ ಕಳೆದ ಜನವರಿಯಿಂದ ಕಾಮಗಾರಿಯನ್ನು ನಿಲ್ಲಿಸಿದೆ.

ಬಾರ್ಜ್ ಓಡಾಟವೂ ಇಲ್ಲ..?: ಕೆರವಡಿ- ಉಳಗಾ ನಡುವೆ ಬಾರ್ಜ್ ಓಡಾಟವನ್ನು ನಿಲ್ಲಿಸಲಾಗಿದೆ. ಕೆರವಡಿ ಭಾಗದಲ್ಲಿ ಸಣ್ಣ ಜಾಗ ಬಿಟ್ಟು ನೀರಿನ ಹರಿವಿಗೆ ಅವಕಾಶ ಮಾಡಿಕೊಡಲಾಗಿದೆ. ಅಲ್ಲಿ, ಅತಿ ವೇಗದಿಂದ ನೀರು ಹರಿಯುವುದರಿಂದ ಬಾರ್ಜ್ ಓಡಾಟ ಸಾಧ್ಯವಿಲ್ಲ ಎನ್ನುತ್ತಾರೆ ಆಪರೇಟರ್​ಗಳು. ಇನ್ನು ಗಂಗಾವಳಿ ಮಂಜಗುಣಿ ನಡುವೆಯೂ ಬಾರ್ಜ್ ಓಟಾಟ ಬಂದ್ ಮಾಡಿ ಸಣ್ಣ ದೋಣಿಯಲ್ಲಿ ಜನರನ್ನು ಸಾಗಿಸಲಾಗುತ್ತಿದೆ. ಮಳೆಗಾಲದಲ್ಲಿ ಅದೂ ಬಂದ್ ಆಗಲಿದ್ದು, ಜನಸಂಚಾರ ದುಸ್ಥರವಾಗಲಿದೆ. ಇದರಿಂದ ಎರಡೂ ಕಡೆ ಮಣ್ಣು ತೆರವು ಮಾಡಿ ಬಾರ್ಜ್ ಓಡಾಟಕ್ಕೆ ಅನುವು ಮಾಡಿಕೊಡಬೇಕು ಎಂಬುದು ಜನರ ಆಗ್ರಹ. ಈ ಕುರಿತು ಜಿಪಂ ಸದಸ್ಯೆ ಗಾಯತ್ರಿ ಗೌಡ ಜಿಪಂ ವಿಶೇಷ ಸಾಮಾನ್ಯ ಸಭೆಯಲ್ಲೂ ಆಗ್ರಹ ಮಾಡಿದ್ದಾರೆ.

ಉಳಗಾ - ಕೆರವಡಿ ಸೇತುವೆ ಕಾಮಗಾರಿಯನ್ನು ಏಕೆ ನಿಲ್ಲಿಸಿದ್ದಾರೆ ಎಂದು ಗೊತ್ತಿಲ್ಲ. ಮುಂದೆ ಶಾಲೆ, ಕಾಲೇಜ್ ಪ್ರಾರಂಭವಾದರೆ ಬಾರ್ಜ್ ಓಡಾಟಕ್ಕೂ ಸಾಧ್ಯವಿಲ್ಲದ ಪರಿಸ್ಥಿತಿ ಇದೆ. ಶೀಘ್ರ ಮಣ್ಣು ತೆರೆವು ಮಾಡಬೇಕು. | ಪ್ರಮಿಳಾ ನಾಯ್ಕ ಕಾರವಾರ ತಾಪಂ ಅಧ್ಯಕ್ಷೆ

ನದಿಗಳಲ್ಲಿ ತುಂಬಿದ ಮಣ್ಣು ತೆಗೆಯಲು ಜಿಲ್ಲಾಧಿಕಾರಿಗಳ ಜತೆ ಮಾತನಾಡಿ ಸೂಕ್ತ ವ್ಯವಸ್ಥೆ ಮಾಡಲಾಗುವುದು. | ಎಂ. ರೋಶನ್, ಜಿಪಂ ಸಿಇಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net