

ತುಮಕೂರು: ಮಣ್ಣು ಉಳಿಸಿ, ಜೀವ ಸಂಕುಲ ರಕ್ಷಿಸಿ ಎಂದು ಕರ್ನಾಟಕ ಪ್ರಗತಿಪರ ರೈತರು ಹಾಗೂ ದೇವರಾಯನದುರ್ಗ ಜೀವ-ವೈವಿಧ್ಯತೆಗಳ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಕರಪತ್ರ ವಿತರಣೆ, ತಮಟೆ ಚಳವಳಿ ಮೂಲಕ ತಾಲೂಕಿನ ದೇವರಾಯನದುರ್ಗ, ನಾಮದ ಚಿಲುಮೆ ಸುತ್ತಮುತ್ತಲ ಗ್ರಾಮಗಳಲ್ಲಿ ಜನಜಾಗೃತಿ ಕಾರ್ಯಕ್ರಮ ನಡೆಯಿತು.
ಸಮಿತಿಯ ಮಹಾಪೋಷಕರೂ ಆದ ಹೈಕೋರ್ಟ್ ನ್ಯಾಯವಾದಿ ಎಲ್.ರಮೇಶ್ ನಾಯ್ಕ್ ನೇತೃತ್ವದಲ್ಲಿ ಶನಿವಾರ ಹಾಗೂ ಭಾನುವಾರ ಅಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ವಿವಿಧ ಗ್ರಾಮ ಪಂಚಾಯಿತಿಗಳ ಸದಸ್ಯರು, ಗ್ರಾಮದ ಮುಖಂಡರು ಭಾಗವಹಿಸಿ ಮಣ್ಣಿನ ಮಹತ್ವದ ಬಗ್ಗೆ ಗ್ರಾಮಸ್ಥರಲ್ಲಿ ಅರಿವು ಮೂಡಿಸಿದರು.
ನ್ಯಾಯವಾದಿ ಎಲ್.ರಮೇಶ್ ನಾಯ್ಕ್ ಮಾತನಾಡಿ, ಗಿಡಮರಗಳೂ ಸೇರಿದಂತೆ ಎಲ್ಲ ಜೀವಿಗಳಿಗೂ ಮಣ್ಣಿಂದಲೇ ಕಾಯ, ಮಣ್ಣಿಂದಲೇ ಬದುಕು. ಮಣ್ಣಿಲ್ಲದೆ ಜೀವಿಗಳಿಲ್ಲ, ಯಾವುದರ ಬದುಕಿಲ್ಲ, ಆಹಾರ ಧಾನ್ಯ ಬೆಳೆಯಲು ಮಣ್ಣೇ ಆಧಾರ. ಅನ್ನ ನೀಡುವ ರೈತರಿಗೆ ಮಣ್ಣೇ ಜೀವನಾಧಾರ. ಮಣ್ಣನ್ನು, ಅದರ ಫಲವತ್ತತೆಯನ್ನು ಕಾಪಾಡುವುದು ಎಲ್ಲರ ಜವಾಬ್ದಾರಿ. ರಾಸಾಯನಿಕಗಳನ್ನು ಬಳಸಿ ಮಣ್ಣಿನ ಆರೋಗ್ಯ ಕೆಡದಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ರೈತರು ದೇಶದ ಬೆನ್ನೆಲುಬು, ಆಹಾರ ಉತ್ಪಾದನೆಯ ಮೂಲ ಎಂದು ಹೇಳುವ ನಾವು ಅನ್ನದಾತರ ಸಮಸ್ಯೆಗಳನ್ನು ಬಗೆಹರಿಸುವ ವಿಚಾರದಲ್ಲಿ ವಿಮುಖರಾಗುತ್ತಿರುವುದು ದುರಾದೃಷ್ಟಕರ. ದೇಶದ ಪ್ರಮುಖ ಆರ್ಥಿಕ ಶಕ್ತಿಯಾಗಬಹುದಾದ ಕೃಷಿಯನ್ನು ಸರ್ಕಾರ, ಇಂದಿನ ಯುವಜನರು ಕಡೆಗಣಿಸಿದ್ದಾರೆ. ಕಾರಣ ಕೃಷಿ ಇಂದು ಲಾಭದಾಯಕವಾಗಿಲ್ಲ. ಕೃಷಿ ಇಲ್ಲದೆ ದೇಶವಿಲ್ಲ ಎನ್ನುವ ಸಂದರ್ಭದಲ್ಲಿ ಕೃಷಿಗೆ ನಾವು ಹೆಚ್ಚು ಮಹತ್ವ, ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಸರ್ಕಾರ ಹಾಗೂ ಸಂಘ&ಸಂಸ್ಥೆ ಕಾಳಜಿವಹಿಸಿ ಕೆಲಸ ಮಾಡಬೇಕು ಎಂದು ಹೇಳಿದರು.
ಒಡಲಲ್ಲಿ ಲಕ್ಷಾಂತರ ಜೀವವೈವಿದ್ಯಗಳು ತುಂಬಿಕೊಂಡಿರುವ ದೇವರಾಯನದುರ್ಗ, ನಾಮದ ಚಿಲುಮೆ, ರಾಮದೇವರ ಬೆಟ್ಟ, ಮೈದಾಳ ಕೆರೆಗಳನ್ನು ಸ್ವಾಭಾವಿಕವಾಗಿ ಉಳಿಯುವಂತೆ ರಕ್ಷಣೆ ಮಾಡಬೇಕು. ಈ ಪ್ರದೇಶದ ಫಲವತ್ತಾದ ಮಣ್ಣನ್ನು ತೆಗೆದು ಹೊರಗೆ ಸಾಗಿಸದಂತೆ ಸರ್ಕಾರ, ಜನರು ಎಚ್ಚರವಹಿಸಬೇಕು. ಈ ಬಗ್ಗೆ ಸುತ್ತಮುತ್ತಲ ಹಳ್ಳಿಗಳ ಜನ ಜಾಗೃತರಾಗಬೇಕು ಎಂದರು. ಊರ್ಡಿಗೆರೆ ಹೋಬಳಿಯ ಅರೆಗುಜ್ಜನಹಳ್ಳಿ, ಮೈದಾಳ, ಜನಪನಹಳ್ಳಿ, ದುರ್ಗದಹಳ್ಳಿ, ನಾಮದ ಚಿಲುಮೆ, ಲಕ್ಷಿ$್ಮ ತಾಂಡಾ, ಜನಪನಹಳ್ಳಿ ತಾಂಡಾ, ಭೈರಾಪುರ, ಮಾದಗೊಂಡನಹಳ್ಳಿ, ಕದರನಹಳ್ಳಿ ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ತಮಟೆ ಚಳವಳಿ ಮೂಲಕ ಕರಪತ್ರ ವಿತರಿಸಿ ಜನಜಾಗೃತಿ ಮೂಡಿಸಲಾಯಿತು.
ಸಮಿತಿ ಅಧ್ಯಕ್ಷ ಬಿ.ಆರ್.ರವೀಂದ್ರ, ಮೈದಾಳ ಗ್ರಾಪಂ ಸದಸ್ಯ ಕೆ.ಎಸ್.ನರಸಿಂಹಮೂರ್ತಿ, ಮೈದಾಳ ಮಲ್ಲಣ್ಣ, ಗಿರೀಶ್, ಕದರನಹಳ್ಳಿ ಪುಟ್ಟರಾಜು, ಪಣಗಾರ್ ಲಕ್ಷಿ$್ಮಕಾಂತ್, ಜನಪನಹಳ್ಳಿ ಗ್ರಾಪಂ ಸದಸ್ಯರಾದ ನರಸಿಂಹರಾಜು, ಶ್ರೀರಂಗಪ್ಪ, ಗೋವಿಂದರಾಜು, ದೊಡ್ಡನರಸಯ್ಯ, ಅರೆಗುಜ್ಜನಹಳ್ಳಿ ಗ್ರಾಪಂ ಸದಸ್ಯರಾದ ಕಾಳಿಯ ನಾಯ್ಕ್, ಡಕಣ ನಾಯ್ಕ್, ಎ.ಆರ್.ಮಂಜುನಾಥ್, ಬಿ.ಹನುಮಂತರಾಯಪ್ಪ, ಸೀತಕಲ್ ಪಂಚಾಯಿತಿಯ ನಾಗರಾಜು, ಪುಟ್ಟರಾಜು, ಬಿ.ಎಂ.ಪಾಳ್ಯ ಬಾಲುಗೌಡ, ಆಲಮರದ ಪಾಳ್ಯದ ನರಸಿಂಹಮೂರ್ತಿ ಮೊದಲಾದವರು ಜಾಗೃತಿ ಆಂದೋನಲದಲ್ಲಿ ಭಾಗವಹಿಸಿದ್ದರು.