

ಗೋಕರ್ಣ: ಒಂದು ಕ್ಷೇತ್ರದ ಮಣ್ಣಿನ ಮಹಿಮೆ ಆ ಕ್ಷೇತ್ರದ ಇತಿಹಾಸ ಮತ್ತು ಭವಿಷ್ಯಗಳಿಗೆ ಕಾರಣವಾಗುತ್ತದೆ. ಮಣ್ಣಿನ ಮಹಿಮೆಗೆ ಸಾಟಿಯಾದುದು ಬೇರೊಂದಿಲ್ಲ ಎಂದು ಶ್ರೀರಾಮಚಂದ್ರಾಪುರ ಮಠದ ಪೀಠಾಧಿಪತಿ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.
ಇಲ್ಲಿನ ಅಶೋಕೆಯಲ್ಲಿ ಶ್ರೀಗಳ 26ನೇ ವಿದ್ಯಾ ಚಾತುರ್ವಸ್ಯ ಸೀಮೋಲ್ಲಂಘನ ನಿಮಿತ್ತ ನಡೆದ ಧರ್ಮಸಭೆಯಲ್ಲಿ ಶ್ರೀಗಳು ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಶಿಕಾರಿಪುರದ ಕೆ.ಎಸ್. ಗುರುಮೂರ್ತಿ ಅವರಿಗೆ ಚಾತುರ್ವಸ್ಯ ಪ್ರಶಸ್ತಿ ಪ್ರದಾನ ಮಾಡಿ ಆಶೀರ್ವಚನ ನೀಡಿದರು.
ಗೋಕರ್ಣದ ಮಣ್ಣಿನ ಮಹಿಮೆಯೇ ಇಲ್ಲಿ ಮಹತ್ಕಾರ್ಯ ನಡೆಯುವಂತೆ ಮಾಡಿದೆ. ಜ್ಯೋತಿರ್ಲಿಂಗಗಳು 12 ಇವೆ. ಆದರೆ, ಗೋಕರ್ಣ ವಿಶ್ವದ ಏಕಮೇವ ಆತ್ಮಲಿಂಗ ತಾಣ. ಜೊತೆಗೆ ಆಂಜನೇಯನ ಜನ್ಮಭೂಮಿ. ಆದಿಶಂಕರರು ಮೂರು ಬಾರಿ ಸಂದರ್ಶಿಸಿ ಹಲವು ಕಾಲ ತಪಸ್ಸುಗೈದ ಸ್ಥಳ. ಇವುಗಳ ಸಂಗಡ ಮಂತ್ರ ದೃಷ್ಟಾರ ಬ್ರರ್ಹ¾ ದೈವರಾತರ ಕರ್ಮಭೂಮಿ. ಇಂತಲ್ಲಿ ಚಾತುರ್ವಸ್ಯ ಮಾಡುವುದರಿಂದ ಭಾಗವಹಿಸುವ ಎಲ್ಲರಿಗೂ ಬಹುಗುಣ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದರು.
ಗೋಕರ್ಣದ ಇತಿಹಾಸದಂತೆ ವಿಷ್ಣುಗುಪ್ತ ವಿಶ್ವ ವಿದ್ಯಾಪೀಠ ಮತ್ತು ಎರಡು ಅಪರೂಪದ ಗುರುಕುಲಗಳ ಮೂಲಕ ಭವಿಷ್ಯವೂ ಉಜ್ವಲ. ಶ್ರೀಮಠ ಇಂತಹ ಮಹಿಮಾನ್ವಿತ ಭೂಮಿಯಲ್ಲಿ ದೇಶದ ಹೆಮ್ಮೆಯ ಆಸ್ತಿಯಾಗಿ ಉತ್ತರ ಕನ್ನಡದ ಮುಕುಟಪ್ರಾಯ ಶಿಕ್ಷಣ ಕ್ಷೇತ್ರವಾಗಿ ಶುಭಾರಂಭ ಮಾಡಿದೆ. ಈ ಹಿನ್ನೆಲೆಯಲ್ಲಿ ಈ ವರ್ಷದ ವಿದ್ಯಾ ಚಾತುರ್ವಸ್ಯ ವಿದ್ಯಾಪೀಠ ನಿರ್ವಣದ ಚಾತುರ್ವಸ್ಯ. ಶ್ರೀಮಠದ ಈ ಭವಿಷ್ಯ ನಿರ್ವಣದಲ್ಲಿ ಎಲ್ಲರೂ ಪಾಲ್ಗೊಳ್ಳುವಂತಾಗಲಿ ಎಂದು ಶ್ರೀಗಳು ಆಶೀರ್ವದಿಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ, ಸಮಾಜಕ್ಕೆ ಹೊಸ ದಿಕ್ಕು ಕೊಟ್ಟವರು ರಾಘವೇಶ್ವರ ಶ್ರೀಗಳು. ಶ್ರೀಗಳಿಂದಾಗಿ ಇದು ಭಕ್ತರ ಚಾತುರ್ವಸ್ಯವಾಗಿ ನಾಡಿನ ಸಮಸ್ತ ಭಕ್ತರನ್ನು ಆಕರ್ಷಿಸುವಂತೆ ಅವರು ಮಾಡಿದ್ದಾರೆ. ಇಂತಹ ಗುರುವರ್ಯರ ಕೃಪೆಯಿಂದ ಮಾತ್ರ ಸಮಾಜ ಬೆಳೆಯುವುದಕ್ಕೆ ಸಾಧ್ಯ. ಶ್ರೀಗಳಿಂದ ಪಡೆದ ಪ್ರಶಸ್ತಿಗೆ ತಮ್ಮ ಪೂರ್ವ ಜನ್ಮ ಸುಕೃತ ಕಾರಣವಾಗಿದೆ ಎಂದು ನುಡಿದರು.
ವಿದ್ವಾನ್ ಜಗದೀಶ ಶರ್ಮ ಸಂಪ ಅಭಿನಂದನಾ ಭಾಷಣ ಮಾಡಿದರು. ಅರುಣ ಹೆಗಡೆ ಪ್ರಶಸ್ತಿ ಪತ್ರ ವಾಚಿಸಿದರು. ಚಾತುರ್ವಸ್ಯ ಸಮಿತಿ ಕೋಶಾಧ್ಯಕ್ಷ ಸುಬ್ರಾಯ ಭಟ್ಟ ಮೂರೂರು ಆಯವ್ಯಯ ವಿವರಿಸಿದರು. ಗಂವಾರ ಮಠದ ಪೀಠಾಧಿಪತಿ ಶ್ರೀ ಪಾಂಡುರಂಗ ಮಹಾರಾಜರು, ಹವ್ಯಕ ಮಹಾಮಂಡಳ ಅಧ್ಯಕ್ಷ ಆರ್.ಎಸ್. ಹೆಗಡೆ ಹರಗಿ, ಚಾತುರ್ವಸ್ಯ ಸಮಿತಿ ಗೌರವಾಧ್ಯಕ್ಷ ಡಿ.ಡಿ. ಶರ್ಮಾ ಉಪಸ್ಥಿತರಿದ್ದರು. ಗಣೇಶ ಜೋಶಿ ನಿರ್ವಹಿಸಿದರು. ಶ್ರೀಕಾಂತ ಪಂಡಿತ ಅಭಿನಂದಿಸಿದರು.