

ಗೋಣಿಕೊಪ್ಪ: ಆಹಾರ ಉತ್ಪಾದನೆಯಲ್ಲಿ ಮಣ್ಣಿನ ಮೌಲ್ಯಕ್ಕೆ ಒತ್ತು ನೀಡಿ ಎಂದು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ.ಹೇಮ್ಲಾನಾಯಕ್ ಸಲಹೆ ನೀಡಿದರು.
ಸೋಮವಾರ ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಅರಣ್ಯ ಮಹಾವಿದ್ಯಾಲಯ, ವಿಸ್ತರಣಾ ಶಿಕ್ಷಣ ಘಟಕ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಕೃಷಿ ಮಹೋತ್ಸವ ಹಾಗೂ ವಿಶ್ವ ಮಣ್ಣು ದಿನಾಚರಣೆಯಲ್ಲಿ ಕೃಷಿ ಪೂರಕ ಸಲಹೆ ನೀಡಿದರು.
ಆಹಾರ ಉತ್ಪಾದನೆ ಸಂದರ್ಭ ಇಳುವರಿಗಾಗಿ ನೀಡುತ್ತಿದ್ದ ಕಾಳಜಿಯಿಂದ ಹೆಚ್ಚು ರಾಸಾಯನಿಕಗಳ ಬಳಕೆಯಾಗಿದೆ. ಜನಸಂಖ್ಯೆಗೆ ಪೂರಕವಾಗಿ ಹೆಚ್ಚು ಗೊಬ್ಬರ ಬಳಕೆ, ಇಳುವರಿ ಹೆಚ್ಚಿಸುವ ತಳಿಗಳನ್ನು ಕೃಷಿ ಮಾಡುವುದು ಸಾಮಾನ್ಯವಾಗಿದೆ. ಆದರೆ, ಕೆಮಿಕಲ್ ಬಳಕೆಯಿಂದ ಪರಿಸರದಲ್ಲಿ ಆಗಿರುವ ಅಸಮತೋಲನವನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಈ ನಿಟ್ಟಿನಲ್ಲಿ ಫಸಲು ಹೆಚ್ಚು ಪಡೆಯುವ ಚಿಂತನೆಗಿಂತ ಆಹಾರ ಮತ್ತು ಮಣ್ಣಿನ ಮೌಲ್ಯ ಅರಿತು ಉತ್ಪಾದನೆಗೆ ಮುಂದಾಗಬೇಕಿದೆ. ಇದರಿಂದ ಪರಿಸರ ಅಸಮತೋಲನ ನಿಯಂತ್ರಣ ಸಾಧ್ಯ. ಈ ಬಗ್ಗೆ ಜಾಗೃತಿ ಅವಶ್ಯ ಎಂದರು.
ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ.ಮೃತ್ಯುಂಜಯ ಸಿ.ವಾಲಿ ಮಾತನಾಡಿ, ಭಾರತ ದೇಶದ ಭೌಗೋಳಿಕವಾಗಿ ವಿದೇಶಿ ಬೆಳೆಗಳನ್ನು ಬೆಳೆಯಲು ಪೂರಕವಾಗಿರುವುದರಿಂದ ಕೃಷಿಯಿಂದ ಹಿಂದೆ ಸರಿಯುವ ಯೋಚನೆ ಮಾಡಬಾರದು. ರಾಜ್ಯ ಸರ್ಕಾರ ಕೃಷಿಗೆ ಮತ್ತಷ್ಟು ಪ್ರೋತ್ಸಾಹ ನೀಡಲು ಚಿಂತನೆ ನಡೆಸಿದ್ದು, ಈ ಬಗ್ಗೆ ಸಾಕಷ್ಟು ಸಲಹೆಗಳನ್ನು ವಿಜ್ಞಾನಿಗಳಿಂದ ಪಡೆಯಲಾಗುತ್ತಿದೆ. ಪ್ರಾಥಮಿಕ ಕೃಷಿ ಪದ್ಧತಿಯೊಂದಿಗೆ 2ನೇ ಹಂತದ ಕೃಷಿಗೂ ಉತ್ತೇಜನಕ್ಕೆ ಯೋಜನೆ ರೂಪಿಸುವ ಹಂತದಲ್ಲಿದೆ. ಇದರಿಂದಾಗಿ ಕೃಷಿಕರು ಆಹಾರ ಉತ್ಪಾದನೆಯಲ್ಲಿ ಹಿಂದೆ ಸರಿಯಬಾರದು ಎಂದರು.
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೋಮೇಂಗಡ ಗಣೇಶ್ ತಿಮ್ಮಯ್ಯ ಸನ್ಮಾನ ಸ್ವೀಕರಿಸಿ ಮಾತನಾಡಿ, ಸ್ವಾವಲಂಬಿಯಾಗಿ ನಮ್ಮದೇ ಚಿಂತನೆಯಲ್ಲಿ ಕೃಷಿಯಲ್ಲಿ ತೊಡಗಿಸಿಕೊಳ್ಳುವುದರಿಂದ ಹೆಚ್ಚು ಪ್ರಯೋಜನವಿದೆ. ಮಿಶ್ರ ಬೆಳೆ ಪದ್ಧತಿ ನಮ್ಮನ್ನು ಆರ್ಥಿಕವಾಗಿ ಸಬಲರನ್ನಾಗಿಸುತ್ತದೆ ಎಂದರು.
ಅರಣ್ಯ ಮಹಾವಿದ್ಯಾಲಯದ ಮುಖ್ಯಸ್ಥ ಡಾ. ಚೆಪ್ಪುಡೀರ ಜಿ.ಕುಶಾಲಪ್ಪ ಅವರನ್ನು ಸನ್ಮಾನಿಸಲಾಯಿತು.
ರೈತರಿಗೆ ಜೇನು ಪೆಟ್ಟಿಗೆ ವಿತರಿಸಲಾಯಿತು. ಕೊಡಗಿನ ಕೃಷಿಯಲ್ಲಿನ ಅವಕಾಶಗಳು, ವೈಜ್ಞಾನಿಕ ಕೃಷಿ ಪದ್ಧತಿಗಳು, ಸಮಗ್ರ ಕೃಷಿ ಪಾಲನೆ, ವಿಚಾರ ವಿನಿಮಯ, ವಸ್ತು ಪ್ರದರ್ಶನ, ಕೃಷಿ ಆದಾಯ ಹೆಚ್ಚಿಸಿಕೊಳ್ಳಲು ಕೈಗೊಳ್ಳಬಹುದಾದ ಕೃಷಿ ಸಂಬಂಧಿತ ಚಟುವಟಿಕೆ ಹಾಗೂ ಉಪ ಕಸುಬುಗಳ ಬಗ್ಗೆ ಮಾಹಿತಿ ನೀಡಲಾಯಿತು.
ಕೃಷಿ, ತೋಟಗಾರಿಕೆ, ಅರಣ್ಯ, ಪಶುಸಂಗೋಪನೆ, ಮೀನುಗಾರಿಕೆ ಇಲಾಖೆ ಮತ್ತು ವಿರಾಜಪೇಟೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಕೃಷಿ ಪೂರಕ ಪರಿಕರ, ಗಿಡ, ಭತ್ತದ ಬೀಜ ಪ್ರದರ್ಶನ ನಡೆಯಿತು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಶಬಾನಾ ಶೇಖ್, ಮೂಡಿಗೆರೆ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ.ಎಂ.ಶಿವಪ್ರಸಾದ್, ಪೊನ್ನಂಪೇಟೆ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಅಧೀಕ್ಷಕ ಡಾ.ಜಿ.ಎನ್.ಹೊಸಗೌಡ, ವಿಸ್ತರಣಾ ಶಿಕ್ಷಣ ಘಟಕ ಮುಖ್ಯಸ್ಥ ಡಾ.ಆರ್. ಎನ್.ಕೆಂಚರೆಡ್ಡಿ ಇದ್ದರು.