ಮಣ್ಣಿನ ಫಲವತ್ತತೆಗೆ ರೈತರಲ್ಲಿ ಜಾಗೃತಿ ಮೂಡಿಸಿ; ಜಿಲ್ಲಾಧಿಕಾರಿ ಕೆ.ಎಸ್.ಲತಾ ಕುಮಾರಿ ಸೂಚನೆ

03_HSN_01
Published on

ಹಾಸನ: ಮಣ್ಣಿನ ಫಲವತ್ತತೆ ಹೆಚ್ಚಿಸಲು ಹಾಗೂ ಗುಣಮಟ್ಟ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ರೈತರಲ್ಲಿ ಜಾಗೃತಿ ಮೂಡಿಸುವಂತೆ ಜಿಲ್ಲಾಧಿಕಾರಿ ಕೆ.ಎಸ್ ಲತಾ ಕುಮಾರಿ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಬೆಳೆ ಪರಿಸ್ಥಿತಿ, ಬಿತ್ತನೆ ಬೀಜ, ರಸಗೊಬ್ಬರಗಳ ಸಮರ್ಪಕ ಪೂರೈಕೆ ಕುರಿತು ನಡೆದ ಸಭೆಯಲ್ಲಿ ಮಾತನಾಡಿದ ಅವರು, ಜಮೀನಿನಲ್ಲಿ ಕಳೆ ಬಾರದಂತೆ ಬಳಸುವ ಕಳೆನಾಶಕವನ್ನು ಬಳಸುವುದರಿಂದ ಮಣ್ಣಿನ ಗುಣಮಟ್ಟ ಹಾಳಾಗುತ್ತಿದೆ. ಈ ನಿಟ್ಟಿನಲ್ಲಿ ಕಳೆಯನ್ನು ಯಂತ್ರಗಳ ಮೂಲಕ ಕಟ್ ಮಾಡುವಂತೆ ರೈತರಿಗೆ ಮಾಹಿತಿ ನೀಡುವುದರ ಜತೆಗೆ ಬಳಕೆಗೆ ಉತ್ತೇಜನ ನೀಡಲು ತಿಳಿಸಿದರು.

ಕಳೆನಾಶಕ ಹೆಚ್ಚಾಗಿ ಬಳಸುವುದರಿಂದ ಭೂಮಿಯ ಫಲವತ್ತತೆ ಹಾಳಾಗಿ ಮುಂದಿನ ದಿನಗಳಲ್ಲಿ ಏನ್ನನ್ನೂ ಬೆಳೆಯದ ಪರಿಸ್ಥಿತಿಗೆ ತಲುಪುತ್ತೇವೆ. ಆದ್ದರಿಂದ ಎಚ್ಚರಿಕೆ ವಹಿಸಬೇಕಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಮಳೆಯಿಂದ ಹಾನಿಯಾಗಿರುವ ಬೆಳೆಯ ನಷ್ಟವನ್ನು ಅಂದಾಜು ಮಾಡಿ ಸರ್ಕಾರಕ್ಕೆ ವರದಿ ಕಳುಹಿಸಿ. ಜಿಲ್ಲೆಯಲ್ಲಿ ಮುಸುಕಿನ ಜೋಳಕ್ಕೆ ಬಂದಿರುವ ಬಿಳಿ ಸುಳಿ ರೋಗವನ್ನು ತಡೆಗಟ್ಟಲು ಮುಂಜಾಗ್ರತೆ ವಹಿಸುವುದರ ಜತೆಗೆ ಭವಿಷ್ಯದಲ್ಲಿ ಮರುಕಳಿಸದಂತೆ ತಡೆಯಲು ಯಾವ ರೀತಿ ಕ್ರಮ ಕೈಗೊಳ್ಳಬೇಕು ಹಾಗೂ ಬೆಳೆ ಸಂರಕ್ಷಣೆ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಕ್ರಮವಹಿಸಿ ಎಂದು ತಿಳಿಸಿದರು.

ಫಂಗಸ್ ತಡೆಯಲು ಪರ್ಯಾಯ ಬೆಳೆ ಬೆಳೆಯಲು ರೈತರಿಗೆ ಮನವರಿಕೆ ಮಾಡಿಕೊಡುವಂತೆ ತಿಳಿಸಿದರಲ್ಲದೆ, ರಸಗೊಬ್ಬರ ಬಳಕೆ ಕಡಿಮೆ ಮಾಡುವುದರ ಜತೆಗೆ ಸಾವಯವ ಕೃಷಿಗೆ ಒತ್ತು ನೀಡುವಂತೆ ಕೃಷಿಕರಿಗೆ ಪ್ರೋತ್ಸಾಹ ನೀಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

2025 ರ ಏಪ್ರಿಲ್, ಮೇ, ಜೂನ್ ತಿಂಗಳಲ್ಲಿ ಹಾಸನ ಜಿಲ್ಲೆಯ ಒಟ್ಟು 38 ಹೋಬಳಿಗಳಲ್ಲಿ 22 ಹೋಬಳಿಯಲ್ಲಿ ಶೇ.20 ಕ್ಕಿಂತ ಹೆಚ್ಚು ಮಳೆ ಕೊರತೆ ಕಂಡು ಬಂದಿದೆ ಎಂದು ಜಂಟಿ ಕೃಷಿ ನಿರ್ದೇಶಕರಾದ ರಮೇಶ್ ಅವರು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಮಂಗಳಾ, ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಡಾ.ರಮೇಶ್ ಮತ್ತಿತರ ಅಧಿಕಾರಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net