

ವಿಜಯಪುರ: ಇನ್ನೇನು ಗಣೇಶ ಚತುರ್ಥಿ ಆಚರಿಸೋಕೆ ನಾಡೆಲ್ಲ ಸಜ್ಜಾಗಿದೆ. ಇಂತಹ ಸಂದರ್ಭದಲ್ಲಿ ಗುಮ್ಮಟ ನಗರಿ ವಿಜಯಪುರದಲ್ಲಿ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಅವರ ಟೀಂ ಪರಿಸರ ಸ್ನೇಹಿ ಗಣೇಶೋತ್ಸವದ ಬಗ್ಗ ಅರಿವು ಮೂಡಿಸಲಾಗುತ್ತಿದೆ.
ಪರಿಸರ ಸ್ನೇಹಿ ಗಣೇಶೋತ್ಸವಕ್ಕೆ ಉತ್ತೇಜನ ನೀಡುವ ಸಲುವಾಗಿ ಸಾರ್ವಜನಿಕರಿಗೆ ಹಾಗೂ ಗಜಾನನ ಮಂಡಳಿಗಳಿಗೆಲ್ಲ ಉಚಿತವಾಗಿ ಗಣೇಶ ಮೂರ್ತಿಗಳನ್ನು ನೀಡುವ ಮೂಲಕ ಗಜಾನನ ಉತ್ಸವ ಮಹಾಮಂಡಳ ವಿಭಿನ್ನವಾಗಿ ಸೇವಾ ಕಾರ್ಯ ನಿರ್ವಹಿಸುತ್ತಿದೆ. ವಿಜಯಪುರದ ವಿವಿಧ ಗಜಾನನ ಮಂಡಳಿಗಳಿಗೆ 3ಅಡಿ ಎತ್ತರವಿರುವ ಮಣ್ಣಿನಿಂದ ತಯಾರಿಸಲಾದ ಪರಿಸರ ಸ್ನೇಹಿಯಾದ 150ಕ್ಕೂ ಅಧಿಕ ಗಣೇಶ ಮೂರ್ತಿಗಳನ್ನು ವಿತರಿಸಲಾಗಿದೆ. ಅಲ್ಲದೆ ಸಾರ್ವಜನಿಕರಿಗೂ ಸಹ ಮಣ್ಣಿನಿಂದ ತಯಾರಿಸಲಾದ 1ರಿಂದ 2ಅಡಿ ಎತ್ತರದ 1500ಕ್ಕೂ ಅಧಿಕ ಗಣೇಶನ ಮೂರ್ತಿಗಳನ್ನು ಉಚಿತವಾಗಿ ನೀಡಲಾಗಿದೆ ಎಂದು ಗಜಾನನ ಉತ್ಸವ ಮಹಾಮಂಡಳದ ಅಧ್ಯಕ್ಷ ಶ್ರೀಕಾಂತ ಶಿಂಧೆ ತಿಳಿಸಿದ್ದಾರೆ.
ಈ ಮಹತ್ಕಾರ್ಯದಲ್ಲಿ ಅನೀಲ ಕೊಂಗಿ, ವಿಜಯ ಹಿರೇಮಠ, ಸಚಿನ ಬುಟಾಳೆ, ಸಂತೋಷ ಸೇರಿದಂತೆ ನೂರಾರು ಯುವಕರ ತಂಡ ತೊಡಗಿಕೊಂಡಿದೆ. ಪ್ರತಿಯೊಬ್ಬರೂ ಮಣ್ಣಿನ ಗಣಪಗಳನ್ನೇ ಕೂಡಿಸುವ ಮೂಲಕ ಪರಿಸರಕ್ಕೆ ಸ್ನೇಹಿಯಾಗಿ ಆಚರಣೆ ಮಾಡಬೇಕು ಎಂದು ಗಜಾನನ ಉತ್ಸವ ಮಹಾಮಂಡಳಿ ಮನವಿ ಮಾಡಿದೆ.