

ಮೈಸೂರು: ಮಣಿಪುರದಲ್ಲಿ ಶಾಂತಿ ಮರು ಸ್ಥಾಪನೆಗೆ ಆಗ್ರಹಿಸಿ ಕ್ರೈಸ್ತರ ಪ್ರಗತಿಪರ ಸಂಸ್ಥೆ ವತಿಯಿಂದ ಡಿಎಫ್‌ಆರ್‌ಎಲ್ ಎದುರಿನ ವೃತ್ತದಿಂದ ನೂತನ ಡಿಸಿ ಕಚೇರಿವರೆಗೆ ಮೆರವಣಿಗೆ ನಡೆಸಿ ಮನವಿ ಸಲ್ಲಿಸಲಾಯಿತು.
ಮಣಿಪುರದಲ್ಲಿ 7-8 ತಿಂಗಳಿಂದ ನಡೆಯುತ್ತಿರುವ ಗಲಾಟೆ, ದಾಳಿ, ದೌರ್ಜನ್ಯಗಳು ಮನುಕುಲಕ್ಕೆ ಕಳಂಕ. ಅಲ್ಪಸಂಖ್ಯಾತ ಬುಡಕಟ್ಟು ಸಮುದಾಯವಾದ ಕುಕ್ಕಿ ಮಹಿಳೆಯರ ಮೇಲೆ ದೌರ್ಜನ್ಯ ಎಸಗಲಾಗಿದೆ. ಜತೆಗೆ, ಮಣಿಪುರದಲ್ಲಿ 250ಕ್ಕೂ ಹೆಚ್ಚು ಚರ್ಚ್‌ಗಳನ್ನೂ ನಾಶಪಡಿಸಲಾಗಿದೆ ಎಂದು ಕಿಡಿಕಾರಿದರು.
ದೇಶಾದ್ಯಂತ ಕ್ರೈಸ್ತ ಪಾದ್ರಿಗಳು, ಚರ್ಚ್‌ಗಳ ಮೇಲೆ ನಿರಂತರ ದಾಳಿ, ದೌರ್ಜನ್ಯ ನಡೆಯುತ್ತಿವೆ.
ಆದರೆ, ಸರ್ಕಾರಗಳು ಸಂವಿಧಾನಾತ್ಮಕವಾಗಿ ಆಡಳಿತ ನಡೆಸದೆ ಧರ್ಮ, ಜಾತಿಗಳ ಮಧ್ಯೆ ವಿಷದ ಬೀಜ ಬಿತ್ತಿ ಅಶಾಂತಿಗೆ ಎಡೆಮಾಡಿಕೊಡುತ್ತಿವೆ. ಕ್ರೈಸ್ತ ಸಮುದಾಯ ಸಮಾಜದ ಅಭಿವೃದ್ಧಿಗಾಗಿ ತನ್ನದೇ ಆದ ಕೊಡುಗೆ ನೀಡಿದೆ. ಆದರೂ ಕ್ರೈಸ್ತರು, ದಲಿತರು, ಅಲ್ಪಸಂಖ್ಯಾತರ ಮೇಲಿನ ದಾಳಿಗಳು ನಿರಂತರವಾಗಿ ನಡೆಯುತ್ತಿವೆ. ಸರ್ಕಾರಗಳು ಈ ಬಗ್ಗೆ ಮೌನವಾಗಿರುವುದು ವಿಷಾದನೀಯ ಎಂದು ಕಿಡಿಕಾರಿದರು.
ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ತಡೆಯಬೇಕು. ಅದಕ್ಕಾಗಿ ರಾಷ್ಟ್ರಪತಿ ಆಡಳಿತವನ್ನು ಜಾರಿ ಮಾಡಬೇಕು ಎಂದು ಆಗ್ರಹಿಸಿದರು.
ಸಂಘದ ಅಧ್ಯಕ್ಷ ಜ್ಞಾನಪ್ರಕಾಶ, ಕಾರ್ಯದರ್ಶಿ ಅನಿಲ್‌ಕುಮಾರ್, ಮುಖಂಡರಾದ ರಜನಿಕಾಂತ್, ವಿನೋದ್ ಚಾಕೋ ಇತರರು ಇದ್ದರು.