ಮಣಿಪುರದಲ್ಲಿ ಶಾಂತಿ ಕಾಪಾಡಲು ಪಟ್ಟು

CTD 31 Protest--07
Published on


ಚಿತ್ರದುರ್ಗ: ಮಣಿಪುರದಲ್ಲಿ ಹಿಂಸಾಚಾರ ಆರಂಭವಾಗಿ ಮೂರು ತಿಂಗಳಾದರೂ ಕೇಂದ್ರ ಮತ್ತು ರಾಜ್ಯ ಸರ್ಕಾರ ಹತೋಟಿಗೆ ತರುತ್ತಿಲ್ಲ ಎಂದು ಆರೋಪಿಸಿ ಕ್ರೈಸ್ತ ಸಮುದಾಯದ ಒಕ್ಕೂಟದ ಪದಾಧಿಕಾರಿಗಳು, ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.

ನಗರದ ಮುಖ್ಯರಸ್ತೆಗಳಲ್ಲಿ ಮೌನ ಮೆರವಣಿಗೆ ನಡೆಸಿ, ಒನಕೆ ಓಬವ್ವ ವೃತ್ತದಲ್ಲಿ ಜಮಾಯಿಸಿ ಮಾನವ ಸರಪಳಿ ನಿರ್ಮಿಸಿ ಮಹಿಳೆಯರಿಬ್ಬರ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ಶಾಂತಿ ನೆಲೆಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರಧಾನಿ, ರಾಷ್ಟ್ರಪತಿ ಅವರಿಗೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.

ಫಾದರ್ ಸರ್ಜಿ ಮಾತನಾಡಿ, ಮಣಿಪುರದಲ್ಲಿ 2 ಕೋಮಿನ ನಡುವೆ ಘರ್ಷಣೆ ಉಂಟಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡರೂ 240ಕ್ಕೂ ಹೆಚ್ಚು ಚರ್ಚ್‌ಗಳು ಸುಟ್ಟು ಭಸ್ಮವಾಗಿವೆ. ಕ್ರೈಸ್ತರನ್ನು ದಮನಗೊಳಿಸುವ ಷಡ್ಯಂತರ ನಡೆಯುತ್ತಿದೆ. 140 ಜನ ಬಲಿಯಾಗಿದ್ದಾರೆ. 1

ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಲಕ್ಷಾಂತರ ಜನ ನಿರಾಶ್ರಿತರಾಗಿದ್ದಾರೆ. ಸಾರ್ವಜನಿಕರ ಆಸ್ತಿಗಳಿಗೆ ಹಾನಿ ಉಂಟಾಗಿದೆ. ಆದರೂ ಅಲ್ಲಿನ ಮತ್ತು ಕೇಂದ್ರ ಸರ್ಕಾರ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಶ್ವದಲ್ಲಿ ಶಾಂತಿ ನೆಲೆಸಬೇಕು ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಹೇಳುತ್ತಾರೆ. ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸಲು ಆ ದೇಶಗಳ ಅಧ್ಯಕ್ಷರೊಂದಿಗೆ ಚರ್ಚಿಸುತ್ತಾರೆ. ಆದರೆ, ಮಣಿಪುರದ ಗಲಭೆ ಏಕೆ ನಿಯಂತ್ರಿಸುತ್ತಿಲ್ಲ. ಸರ್ವ ಸಮುದಾಯದವರು ಕೂಡಿ ಬಾಳುತ್ತಿರುವ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಶಾಂತಿ ನೆಲೆಸಲು ಕೂಡಲೇ ಮೌನ ಮುರಿದು ಮಧ್ಯ ಪ್ರವೇಶಿಸಬೇಕು ಎಂದು ಒತ್ತಾಯಿಸಿದರು.

ದೇಶದ ಯೋಧರ, ಪೊಲೀಸರ ಪಡೆ ಸಶಕ್ತವಾಗಿದ್ದು, ಸರ್ವಪಕ್ಷಗಳ ಸಹಕಾರದೊಂದಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡಲು ಮುಂದಾಗಬೇಕು. ದುಷ್ಕೃತ್ಯದಲ್ಲಿ 200ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದು, ಕೂಡಲೇ ಬಂಧಿಸಿ, ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರ ನೀಡಬೇಕು. ನೊಂದ ಸಂತ್ರಸ್ತರ ಜೀವನೋಪಾಯಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಆಗ್ರಹಿಸಿದರು.

ಫಾದರ್‌ಗಳಾದ ಅಲೆಗ್ಸಾಂಡರ್, ಡಿಸೋಜಾ, ಪೌಲ್ ಪ್ರವೀಣ್, ಫಿಲಿಪ್ ರಾಜಾ, ಯೇಸುದಾಸ್, ಸಿಸ್ಟರ್‌ಗಳಾದ ಮೇರಿ, ಎಲಿಜೆಬೆತ್, ಮೇರಿ ಜಾಯಿನಿತಾ, ಜೋಸ್ಪಿನ್, ಗೌತಮಿ ಡಿಸೋಜಾ, ಶ್ವೇತಾ, ಪೌಲಿನ್ ಜೋಸ್ಮಿನ್, ಅನುಷಾ, ಮೇರಿ ಸುನೀತಾ, ಆ್ಯಂಟಿಕ್ ಸುನೀತಾ, ವಿಕ್ಟೋರಿಯಾ ಡಿಸೋಜಾ, ಶೀಲಾ ಮೇರಿ, ಕೃಪಾಲತಾ, ಕಾವ್ಯಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net