ಮಣಿಪುರದಲ್ಲಿ ಗಲಭೆ ಖಂಡಿಸಿ ಬಿಎಸ್ಪಿ ಪ್ರತಿಭಟನೆ

23
Published on

ಮೈಸೂರು: ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆಗೊಳಿಸಿ ಅಮಾನುಷವಾಗಿ ನಡೆಸಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರಪತಿ ಕೂಡಲೇ ಮಧ್ಯ ಪ್ರವೇಶಿಸಬೇಕು ಎಂದು ಒತ್ತಾಯಿಸಿ ಬಿಎಸ್‌ಪಿಯಿಂದ ಬುಧವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.
ಮಣಿಪುರದ ಕುಕಿ ಹಾಗೂ ಮೈತೇಯಿ ಸಮುದಾಯದ ನಡುವಿನ ಜನಾಂಗೀಯ ಘರ್ಷಣೆಯಲ್ಲಿ 156 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕುಕಿ ಜನಾಂಗದ ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿದ್ದಲ್ಲದೆ ಸಾಮೂಹಿಕ ಅತ್ಯಾಚಾರ ಮಾಡಿರುವುದು ದೇಶವೇ ತಲೆ ತಗ್ಗಿಸುವ ಕೃತ್ಯ ಎಂದು ದೂರಿದರು.
ಬಿಜೆಪಿ ಸರ್ಕಾರ ಹಿಂಸಾಚಾರ ನಿಲ್ಲಿಸದೆ ಮೈತೇಯಿ ಸಮುದಾಯದ ಪರ ಪಕ್ಷಪಾತದಿಂದ ಕಾರ್ಯನಿರ್ವಹಿಸುತ್ತಿದೆ. ಮಣಿಪುರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಕೂಡಲೇ ಮುಖ್ಯಮಂತ್ರಿ ಬಿರೆನ್‌ಸಿಂಗ್ ರಾಜೀನಾಮೆ ನೀಡಬೇಕು. ರಾಷ್ಟ್ರಪತಿ ತಕ್ಷಣ ಮಧ್ಯೆ ಪ್ರವೇಶಿಸಬೇಕು ಎಂದು ಆಗ್ರಹಿಸಿದರು.
ಮಣಿಪುರದಲ್ಲಿ ಇಷ್ಟೆಲ್ಲ ಹಿಂಸಾಚಾರ ನಡೆಯುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಸಂಬಂಧ ಇಲ್ಲವೆಂಬಂತೆ ಕಣ್ಣುಮುಚ್ಚಿ ಕುಳಿತಿರುವುದು ನಾಚಿಕೆಗೇಡು. ಹೀಗಾಗಿ ನೈತಿಕಹೊಣೆ ಹೊತ್ತು ರಾಜೀನಾಮೆ ನೀಡಬೇಕು. ರಾಷ್ಟ್ರಪತಿ ಅಲ್ಲಿನ ಜನರ ಪ್ರಾಣ ಆಸ್ತಿಪಾಸ್ತಿ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಪಕ್ಷದ ನಗರಾಧ್ಯಕ್ಷ ಶ್ರೀನಿವಾಸ್‌ಪ್ರಸಾದ್, ಮುಖಂಡರಾದ ಪುರುಷೋತ್ತಮ್, ಭರತ್‌ಕುಮಾರ್, ಶ್ರೀಕಂಠು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net