

ದಾವಣಗೆರೆ: ಮಣಿಪುರದಲ್ಲಿ ಮಹಿಳೆಯರನ್ನು ನಗ್ನಗೊಳಿಸಿ ಮೆರವಣಿಗೆ ಮಾಡಿ, ಅತ್ಯಾಚಾರ ಎಸಗಿದ ಘಟನೆ ಹಿನ್ನೆಲೆಯಲ್ಲಿ ಕ್ರೈಸ್ತ ಸಮುದಾಯದ ಧರ್ಮಸಭೆ, ಧಾರ್ಮಿಕ ಕೇಂದ್ರಗಳ ಮೇಲೆ ದಾಳಿ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ದಾವಣಗೆರೆ ಜಿಲ್ಲಾ ಕ್ರಿಶ್ಚಿಯನ್ ಪರಿಷತ್ತಿನಡಿ ವಿವಿಧ ಸಮಾಜದವರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಧರಣಿ ನಡೆಸಿದರು.
ಮಣಿಪುರದಲ್ಲಿ ಕ್ರೈಸ್ತರನ್ನೇ ಗುರಿಯಾಗಿಸಿ ದಾಳಿ ನಡೆಸಲಾಗುತ್ತಿದೆ. ಬೀದಿ ಹಾಗೂ ಕಾಡು- ಗುಡ್ಡಗಳಲ್ಲಿ ಭಯದ ವಾತಾವರಣದಲ್ಲಿ ಅನೇಕರು ಜೀವನ ನಡೆಸುತ್ತಿದ್ದು, ಸರಿಯಾದ ಆರೋಗ್ಯ ಚಿಕಿತ್ಸೆ ದೊರಕುತ್ತಿಲ್ಲ. ಪೌಷ್ಟಿಕ ಆಹಾರವಿಲ್ಲದೆ ನರಳುವಂತಾಗಿದೆ. ಕೇಂದ್ರ ಸರ್ಕಾರ ಅಥವಾ ಮಣಿಪುರ ಸರ್ಕಾರ ಹಿಂಸಾಚಾರ- ಕೋಮುಗಲಭೆ ನಿಯಂತ್ರಿಸಲು ಸಾಧ್ಯವಾಗದಿರುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶ ತಲೆ ತಗ್ಗಿಸುವಂತಾಗಿದೆ.
ಕೂಡಲೆ ರಾಷ್ಟ್ರಪತಿ ಮಧ್ಯ ಪ್ರವೇಶಿಸಿ, ಪರಿಸ್ಥಿತಿ ನಿಯಂತ್ರಣಕ್ಕೆ ತರಬೇಕು. ಅನ್ಯಾಯಕ್ಕೊಳಗಾದ ಕ್ರೈಸ್ತ ಸಮುದಾಯಕ್ಕೆ ನ್ಯಾಯ ಒದಗಿಸಬೇಕು. ಎಲ್ಲಾ ಜನಾಂಗದ ಧಾರ್ಮಿಕ ಸಭೆಗೆ ರಕ್ಷಣೆ ನೀಡಬೇಕು. ಎಲ್ಲ ಅಪರಾಧಿಗಳಿಗೆ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರ ಮೂಲಕ ರಾಷ್ಟ್ರಪತಿಗೆ ಮನವಿ ರವಾನಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕ್ರಿಶ್ಚಿಯನ್ ಪರಿಷತ್ತಿನ ಅಧ್ಯಕ್ಷ ಫಾಸ್ಟರ್ ಪ್ರೇಮ್‌ಕುಮಾರ್, ಕಾರ್ಯದರ್ಶಿ ಫಾಸ್ಟರ್ ಜಾನ್‌ಬಾಬು, ರವಿಕುಮಾರ್, ಕರುಣಾಕರನ್, ಪೀಟರ್ ಬಾಬು, ಡೆನ್ಸಿಲ್, ದಾದು ಸೇಠ್, ಚಮನ್‌ಸಾಬ್, ಇಮ್ರಾನ್ ರಜ್ಹಾ, ಎಸ್.ಕೆ. ಅಮ್ಜದ್ ಇತರರಿದ್ದರು.