ಮಣಿಪುರ ಬೆತ್ತಲೆ ಮೆರವಣಿಗೆ ಖಂಡಿಸಿ ಪ್ರತಿಭಟನೆ

15
Published on

ಮೈಸೂರು; ಮಣಿಪುರದಲ್ಲಿ ಬುಡಕಟ್ಟು ಮಹಿಳೆಯರ ಬೆತ್ತಲೆ ಮೆರವಣಿಗೆ ಘಟನೆ ಖಂಡಿಸಿ ರಾಜ್ಯ ಮೂಲ ಆದಿವಾಸಿ ವೇದಿಕೆ ವತಿಯಿಂದ ಸಿದ್ಧಾರ್ಥನಗರದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಬಳಿ ಗುರುವಾರ ಪ್ರತಿಭಟನೆ ನಡೆಯಿತು.


ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದಿಂದ ಅಂದಾಜು 200 ಜನರು ಮೃತಪಟ್ಟಿದ್ದಾರೆ. 800 ಜನರು ಗಾಯಗೊಂಡಿದ್ದಾರೆ. 70 ಸಾವಿರ ಜನರು ಸ್ಥಳಾಂತರಗೊಂಡಿದ್ದಾರೆ. ಸಾವಿರಾರು ಜನರು ತಮ್ಮ ಮನೆ, ವಸ್ತುಗಳನ್ನು ತೊರೆದು ವಿವಿಧ ಶಿಬಿರಗಳಲ್ಲಿದ್ದಾರೆ. ಅನೇಕ ಮಹಿಳೆಯರು ಅತ್ಯಾಚಾರಕ್ಕೊಳಗಾಗಿದ್ದಾರೆ. ನೂರಾರು ಮನೆಗಳನ್ನು ಸುಟ್ಟುಹಾಕಲಾಗಿದೆ. ಆದಿವಾಸಿ ಸಹೋದರ-ಸಹೋದರಿಯರು ಈ ಹಿಂಸಾಚಾರಕ್ಕೆ ಬಲಿಯಾಗಿರುವುದು ಹೆಚ್ಚು ಭಯಾನಕವಾಗಿದೆ. ಅಲ್ಲಿನ ರಾಜ್ಯದ ಆಡಳಿತ ಮೂಕ ಮತ್ತು ನಿಷ್ಕ್ರಿಯವಾಗಿದೆ ಎಂದು ಕಿಡಿಕಾರಿದರು.


ಹಿಂಸಾಚಾರ ನಿಯಂತ್ರಿಸಲು ಮಣಿಪುರ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರಕ್ಕೂ ಸಾಧ್ಯವಾಗಿಲ್ಲ. ಇಂತಹ ಭೀಕರ ಘಟನೆಗಳು ನಡೆಯಲು ರಾಜ್ಯವೇ ಅವಕಾಶ ನೀಡುತ್ತಿದೆಯೇ ಎಂಬ ಅನುಮಾನ ವ್ಯಕ್ತಪಡಿಸಿದ ಪ್ರತಿಭಟನಾನಿರತರು, ಈ ಘಟನೆಗಳು ಮಣಿಪುರ ರಾಜ್ಯದಲ್ಲಿ ಮಾತ್ರವಲ್ಲದೆ ಇಡೀ ದೇಶದಲ್ಲಿ ಸಾಮಾಜಿಕ ಅಸ್ಥಿರತೆ, ಅಶಾಂತಿ ಮತ್ತು ಅಭದ್ರತೆ ಸೃಷ್ಟಿಸಿವೆ. ಭಯ, ವಿಶ್ವಾಸ, ಸಹೋದರಿಯರ ಭಾವನೆ, ನಾಗರಿಕತೆಯ ಭಾವನೆ, ಜೀವನದಲ್ಲಿ ಅನಿಶ್ಚಿತತೆ, ಪರಸ್ಪರ ನಂಬಿಕೆ ಕಳೆದುಹೋಗಿದೆ. ಇದು ನೇರವಾಗಿ ಮಹಿಳೆಯರು, ಮಕ್ಕಳು ಮತ್ತು ಪ್ರತಿಯೊಬ್ಬರ ಮೇಲೆ ಪರಿಣಾಮ ಬೀರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಶಾಂತಿ ಮತ್ತು ಸೌಹಾರ್ದತೆ ಮರು ಸ್ಥಾಪಿಸಿಲು ಕೇಂದ್ರ ಸರ್ಕಾರವು ಮಣಿಪುರ ರಾಜ್ಯಕ್ಕೆ ತಕ್ಷಣವೇ ತಂಡ ಕಳುಹಿಸಿಕೊಡಬೇಕು. ರಾಷ್ಟ್ರಪತಿ ಆಳ್ವಿಕೆ ಹೇರಬೇಕು. ಅಸ್ಥಿರತೆ, ಅಶಾಂತಿ, ಅಭದ್ರತೆ, ಹಿಂಸಾಚಾರ ಸೃಷ್ಟಿಸಿದ ಕೋಮುವಾದಿ ಗೂಂಡಾಗಳು ಮತ್ತು ಕೊಲೆಗಡುಕರ ವಿರುದ್ಧ ಕ್ರಮ ಕೈಗೊಳ್ಳಬೇಕು. ಮಹಿಳೆಯರು ಮತ್ತು ಮಕ್ಕಳಿಗೆ ತುರ್ತು ಆಧಾರದ ಮೇಲೆ ಆಶ್ರಯ, ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.


ವೇದಿಕೆಯ ಅಧ್ಯಕ್ಷ ಜೆ.ಎನ್.ವಿಠ್ಠಲ್, ಮುಖಂಡರಾದ ವಿಜಯಕುಮಾರ್, ಡಾ.ಎಂ.ಪಿ.ವರ್ಷ, ಡಾ.ರತ್ನಮ್ಮ, ದೊಡ್ಡಯ್ಯ, ವಿದ್ಯಾ, ಪಥ್ವಿ ಸೇರಿದಂತೆ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net