

ಹಾಸನ: ಮಣಿಪುರದ ಬುಡಕಟ್ಟು ಕ್ರೈಸ್ತ ಸಮುದಾಯದ ಮೇಲೆ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರ ಖಂಡಿಸಿ ಜಿಲ್ಲಾ ಕ್ರೈಸ್ತ ಹಿತರಕ್ಷಣಾ ವೇದಿಕೆಯಿಂದ ಸೋಮವಾರ ಪ್ರತಿಭಟನೆ ನಡೆಯಿತು.
ನಗರದ ಹೇಮಾವತಿ ಪ್ರತಿಮೆಯಿಂದ ಬಳಿಯಿಂದ ಮೆರವಣಿಗೆ ನಡೆಸಿದ ನೂರಾರು ಪ್ರತಿಭಟನಾಕಾರರು ಎನ್.ಆರ್.ವೃತ್ತ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಧರಣಿ ನಡೆಸಿದರು.
ಮಣಿಪುರದಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಸ್ತ್ರೀಯರ ಬೆತ್ತಲೆ ಮೆರಣಿಗೆ, ಚರ್ಚ್‌ಗಳ ಮೇಲೆ ದಾಳಿ, ಜನರ ಹತ್ಯೆ, 90 ದಿನಗಳಿಂದ ಅವ್ಯಾಹತವಾಗಿ ನಡೆದುಕೊಂಡು ಬರುತ್ತಿದ್ದರೂ ನಿಯಂತ್ರಿಸಲು ವಿಫಲವಾಗಿರುವ ಬಿರೇನ್ ಸಿಂಗ್ ನೇತೃತ್ವದ ಸರ್ಕಾರವನ್ನು ವಜಾಗೊಳಿಸಿ, ಕೂಡಲೇ ಕೇಂದ್ರ ಸರ್ಕಾರ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಮಣಿಪುರ ರಾಜ್ಯದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡಿ ದಿಕ್ಕೆಟ್ಟಿರುವ ಬುಡಕಟ್ಟು ಕ್ರೈಸ್ತ ಸಮುದಾಯಕ್ಕೆ ಸೂಕ್ತ ರಕ್ಷಣೆ ಒದಗಿಸಬೇಕು. ಹಿಂಸಾಚಾರದಲ್ಲಿ ಆಸ್ತಿ- ಪಾಸ್ತಿ ಹಾಗು ಪ್ರಾಣ ಕಳೆದುಕೊಂಡ ಪ್ರತಿ ಕುಟುಂಬಗಳಿಗೆ ಪರಿಹಾರ ಘೋಷಿಸಬೇಕು. ಹಿಂಸಾಚಾರಕ್ಕೆ ಒಳಗಾಗಿರುವ ಮಹಿಳೆಯರು ಮತ್ತು ಮಕ್ಕಳನ್ನು ರಕ್ಷಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಕ್ರೈಸ್ತ ಹಿತರಕ್ಷಣಾ ವೇದಿಕೆ ಅಧ್ಯಕ್ಷ ರಾಜೇಶ್ ಮಾತನಾಡಿ, ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಘರ್ಷಣೆಯಲ್ಲಿ ಕುಕಿ ಸಮುದಾಯದ ನೂರಾರು ಜನರು ಸಾವನ್ನಪ್ಪಿದ್ದಾರೆ. ನೂರಾರು ಪ್ರಾರ್ಥನಾ ಮಂದಿರಗಳು ಬೆಂಕಿಗೆ ಆಹುತಿಯಾಗಿವೆ. ಅನೇಕ ಹೆಣ್ಣು ಮಕ್ಕಳು ಅತ್ಯಾಚಾರಕ್ಕೀಡಾಗಿದ್ದಾರೆ. ಜೀವಭಯದಿಂದ ಸಾವಿರಾರು ಜನರು ವಲಸೆ ಹೋಗಿದ್ದಾರೆ. ಕೆಲವರು ಗುಡ್ಡಗಾಡು ಪ್ರದೇಶದಲ್ಲಿ ತಲೆ ಮರೆಸಿಕೊಂಡಿದ್ದಾರೆ. ಇಷ್ಟೊಂದು ಹಿಂಸಾಚಾರ ಕೃತ್ಯಗಳು ನಡೆಯುತ್ತಿದ್ದರೂ, ಸ್ಥಳೀಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ನ್ಯಾಯ ಎಂಬುದು ಕಣ್ಮರೆಯಾಗಿದೆ. ಅಲ್ಲಿನ ಪೊಲೀಸ್ ವ್ಯವಸ್ಥೆ ಸಂಪೂರ್ಣ ನಿಷ್ಕ್ರಿಯಗೊಂಡಿದೆ ಎಂದು ದೂರಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕ್ರೈಸ್ತರ ಹಿತರಕ್ಷಣಾ ವೇದಿಕೆಯ ಪ್ರಧಾನ ಕಾಯದರ್ಶಿ ವಿ.ವಿ. ಯೊಗೀಶ್, ಉಪಾಧ್ಯಕ್ಷ ಸ್ಟ್ವೀವನ್ ಸನ್, ಸಹ ಕಾರ್ಯದರ್ಶಿ ಬಿ.ಜೆ. ನವೀನ್, ಖಜಾಂಚಿ ಎಸ್.ಡಿ. ಜೇಕೋಬ್ ಬಾಬು, ಸದಸ್ಯ ಕೆ. ಮೂರ್ತಿ, ಟಿಪ್ಪು ಸಂಘರ್ಷ ಸಮಿತಿ ಅಧ್ಯಕ್ಷ ಮುಬಾಶೀರ್ ಅಹಮದ್, ಬಾಳೆಹಣ್ಣು ವರ್ತಕರ ಸಂಘದ ಅಧ್ಯಕ್ಷ ಸಮೀರ್ ಅಹಮದ್, ಕಾಂಗ್ರೆಸ್ ಮುಖಂಡರಾದ ಮುನಿಸ್ವಾಮಿ, ಜಾರ್ಜ್, ವಿನಯ್ ಗಾಂಧಿ, ದಲಿತ ಮುಖಂಡರಾದ ಅಂಬೂಗ ಮಲ್ಲೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.