

ಮೈಸೂರು; ಮಣಿಪುರದಲ್ಲಿ ಇಬ್ಬರು ಹೆಣ್ಣುಮಕ್ಕಳ ಬೆತ್ತಲೆ ಮೆರವಣಿಗೆ ಮತ್ತು ಅತ್ಯಾಚಾರ ಘಟನೆ ಖಂಡಿಸಿ ಎಐಡಿಎಸ್‌ಒ ವತಿಯಿಂದ ನಗರದಲ್ಲಿ ಭಾನವಾರ ಪ್ರತಿಭಟನೆ ನಡೆಯಿತು.
ರಾಮಸ್ವಾಮಿ ವೃತ್ತದ ಬಳಿ ಇರುವ ಡಿ.ಸುಬ್ಬಯ್ಯ ರಸ್ತೆಯಲ್ಲಿರುವ ಸಂಘಟನೆಯ ಕಚೇರಿ ಮುಂದೆ ಸೇರಿದ ಪ್ರತಿಭಟನಾಕಾರರು, ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಘಟನೆಯು ದೇಶದ ಜನರಲ್ಲಿ ಅತೀವ ಸಂಕಟವನ್ನು ಉಂಟು ಮಾಡಿದೆ. ಸಮುದಾಯದ ಹೆಸರಿನಲ್ಲಿ ಜನಗಳ ಸಾಮೂಹಿಕ ಹತ್ಯೆ, ದಾಳಿಗಳು, ಅತ್ಯಾಚಾರ, ಗುಂಪು ಅತ್ಯಾಚಾರ ಘಟನೆಗಳೂ ಮಣಿಪುರದಲ್ಲಿ ಕಳೆದ ಎರಡು ತಿಂಗಳಿಂದ ಎಡೆಬಿಡದೆ ನಡೆಯುತ್ತಿದೆ. ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳ ನೀತಿಗಳು, ಸಮುದಾಯಗಳ ನಡುವೆ ವಿಭಜನೆಯನ್ನು ಉಂಟು ಮಾಡಿ ಮಣಿಪುರ ಹೊತ್ತುರಿಯಲು ಕಾರಣವಾಗಿದೆ ಎಂದು ಕಿಡಿಕಾರಿದರು.
ಇಬ್ಬರು ಹೆಣ್ಣು ಮಕ್ಕಳನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ದೇಶದ ಜನ ಆಘಾತಕ್ಕೆ ಒಳಗಾಗಿದ್ದಾರೆ. ಇಂತಹ ನೂರಾರು ಘಟನೆಗಳು ಈ ಹಿಂದೆ ಜರುಗಿವೆ ಎಂದು ಮಣಿಪುರದ ಮುಖ್ಯಮಂತ್ರಿ ನಾಚಿಕೆಯಿಲ್ಲದೆ ಹೇಳಿದ್ದಾರೆ. ಈ ಅಮಾನವೀಯ ನಡವಳಿಕೆಗೆ ತುತ್ತಾದ ಹೆಣ್ಣು ಮಗಳು, ಈ ಘಟನೆ ನಡೆಯುವಾಗ ನಮಗೆ ಪೊಲೀಸರಿಂದ ಸಹಾಯ ಸಿಗಲಿಲ್ಲ. ಬದಲಿಗೆ, ಆರೋಪಿಗಳ ಕೈಗೆ ಅವರೇ ನಮ್ಮನ್ನು ಒಪ್ಪಿಸಿದರು ಎಂದು ಅತ್ಯಂತ ನೋವಿನಿಂದ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಮಣಿಪುರದಲ್ಲಿ ನಡೆಯುತ್ತಿರುವ ಪ್ರಕ್ಷುಬ್ಧತೆಯನ್ನು ಬಿಜೆಪಿ ಸರ್ಕಾರ ಹೇಗೆ ನಿಭಾಯಿಸಿದೆ ಎನ್ನುವುದಕ್ಕೆ ಆ ಹೆಣ್ಣುಮಕ್ಕಳ ಸ್ಥಿತಿಯೇ ಸಾಕ್ಷಿಯಾಗಿದೆ. ಸರ್ಕಾರವು ತನ್ನ ಅಜೆಂಡಾವನ್ನು ಮುಂದುವರಿಸಲು, ವೈಷಮ್ಯವನ್ನು ಸೃಷ್ಟಿಸಿ, ಆ ಮೂಲಕ ಸಮುದಾಯಗಳ ನಡುವಿನ ವಿಭಜನೆಯನ್ನು ಪ್ರೋತ್ಸಾಹಿಸಿದೆ. ಸರ್ಕಾರದಿಂದ ಸಾಂತ್ವನದ ಮಾತುಗಳು ಸಾಮಾನ್ಯ ರೀತಿಯದ್ದಾಗಿದ್ದು, ವಿಳಂಬವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಣಿಪುರದಲ್ಲಿ ನಡೆಯುತ್ತಿರುವ ಪ್ರತಿಯೊಂದು ಹಿಂಸಾಚಾರಗಳು ಮಾನವೀಯತೆ ನಾಚಿಕೆಪಡುವಂತಹ ಸಂಗತಿಯಾಗಿದೆ. ಇವು ಸ್ವಯಂಪ್ರೇರಿತವಾಗಿ ನಡೆಯುವ ಘರ್ಷಣೆಗಳಲ್ಲ. ಬದಲಿಗೆ ಆಳುವ ವರ್ಗದ ಕೈವಾಡ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಮಾನವತೆಯನ್ನು ಉಳಿಸಲು ಜನರೆಲ್ಲ ಮುಂದೆ ಬರಬೇಕು ಎಂದು ವಿನಂತಿ ಮಾಡಿದರು.
ಸಂಘಟನೆಯ ಜಿಲ್ಲಾಧಕ್ಷ ಸುಭಾಷ್, ಪದಾಧಿಕಾರಿಗಳಾದ ನಿತಿನ್, ಸ್ವಾತಿ, ಚಂದನ, ವಿದ್ಯಾರ್ಥಿಗಳಾದ ಸಿದ್ದರಾಜು, ಶ್ರೀಶೈಲ, ಚೇತನ್, ಮೋಹನ್, ದಿವ್ಯ ಮುಂತಾದವರು ಇದ್ದರು.