ಮಣಿಪಾಲ್ ಆಸ್ಪತ್ರೆಯಿಂದ ಯಶಸ್ವಿ ಚಿಕಿತ್ಸೆ

IMG-20221021-WA0045
Published on

ಮೈಸೂರು: ಸಂಕೀರ್ಣವಾಗಿದ್ದ ಮಿದುಳು ಹಾಗೂ ಬೆನ್ನುಮೂಳೆ ಸಮಸ್ಯೆಗೆ ನಗರದ ಹೆಸರಾಂತ ಮಣಿಪಾಲ್ (ಕೊಲಂಬಿಯಾ ಏಷಿಯಾ) ಆಸ್ಪತ್ರೆ ಯಶಸ್ವಿ ಶಸ್ತಚಿಕಿತ್ಸೆ ನೆರವೇರಿಸಿದ್ದು, ರೋಗಿಗಳ ಮೊಗದಲ್ಲಿ ನಗು ಅರಳಿಸಿ, ಕುಟುಂಬದಲ್ಲಿ ನೆಮ್ಮದಿ ತಂದಿದೆ.
ಮೆದುಳಿನಲ್ಲಿ ಇದ್ದ ಗೆಡ್ಡೆ (ಬ್ರೈನ್ ಟ್ಯೂಮರ್) ಹಾಗೂ ಬೆನ್ನು, ಸೊಂಟ (ಡಿಸ್ಕ್) ಎಂದರೆ ಹಲವರಲ್ಲಿ ಬಹಳಷ್ಟು ತಪ್ಪು ಕಲ್ಪನೆಗಳಿವೆ. ಅವುಗಳನ್ನು ಹೋಗಲಾಡಿಸಿ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ ಎಂದು ಚಿಕಿತ್ಸೆ ನೆರವೇರಿಸಿದ ಆಸ್ಪತ್ರೆ ವೈದ್ಯ ಡಾ.ಮಕ್ಸೂದ್ ಅಹ್ಮದ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೊಡಗು ಜಿಲ್ಲೆಯ 16 ವರ್ಷದ ಬಾಲಕಿಗೆ ಮೆದುಳಿನ ಯಶಸ್ವಿ ಚಿಕಿತ್ಸೆ ನಡೆಸಿದ್ದರೆ, ಹಿನಕಲ್‌ನ 35 ವರ್ಷದ ದೇವರಾಜ್ ಅವರಿಗೆ ಬೆನ್ನು, ಸೊಂಟದ ಚಿಕಿತ್ಸೆ ನಡೆಸಿದ್ದು, ಈಗ ಸಾಮಾನ್ಯರಂತೆ ಇದ್ದಾರೆ. ಇದರಿಂದ ಇತರರಿಗೆ ಸ್ಪೂರ್ತಿ ದೊರೆಯಲಿ ಎನ್ನುವುದು ನಮ್ಮ ಉದ್ದೇಶ ಎಂದರು.
ಮೆದುಳಿನಲ್ಲಿ ಒಂದು ವೇಳೆ ಗಡ್ಡೆ ಬೆಳೆದಿದ್ದರೆ ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಗುಣ ಪಡಿಸಬಹುದು. ಅಲ್ಲದೆ ಈ ರೀತಿಯ ಶಸ್ತ್ರಚಿಕಿತ್ಸೆಗಳು ಅಪಾಯಕಾರಿಯಲ್ಲ. ಸಾಮಾನ್ಯ ತಲೆನೋವೆಲ್ಲ ಮಿದುಳಿನಲ್ಲಿ ಗಡ್ಡೆ ಇರುವುದರ ಲಕ್ಷಣವಲ್ಲ. ಸೂಕ್ತ ಔಷಧದಿಂದ ವಾಸಿಯಾಗಬಲ್ಲದು. ಆದರೆ ತೀವ್ರ ಸ್ವರೂಪದ ತಲೆನೋವು ಹಠಾತ್ತನೆ ಉಂಟಾಗುವುದು, ವಾಂತಿ, ತೊದಲು, ನಡೆಯುವಾಗ ಹೆಜ್ಜೆ ತಪ್ಪುವುದು ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಕಾಣುವಂತೆ ಸಲಹೆ ನೀಡಿದರು.
ಚಿಕಿತ್ಸೆ ಪಡೆಯುವುದಕ್ಕಿಂತ ಕಾಯಿಲೆ ಬರದಂತೆ ನೋಡಿಕೊಳ್ಳುವುದು ಉತ್ತಮ. ವೈದ್ಯರು ಎಷ್ಟೇ ಚಿಕಿತ್ಸೆ ನೀಡಿದರೂ ರೋಗಿ ಜೀವನ ಶೈಲಿ ಬದಲಿಸಿಕೊಳ್ಳದಿದ್ದಲ್ಲಿ ಕಾಯಿಲೆ ಸಂಪೂರ್ಣವಾಗಿ ಗುಣಮುಖವಾಗುವುದಿಲ್ಲ. ಹೀಗಾಗಿ ಪ್ರತಿಯೊಬ್ಬರೂ ಉತ್ತಮ ಜೀವನಶೈಲಿ ಅಳವಡಿಸಿಕೊಳ್ಳಬೇಕು. ಯೋಗ, ವ್ಯಾಯಾಮ ಮಾಡಬೇಕು. ಆರೋಗ್ಯಕರ ಆಹಾರ ಸೇವಿಸಬೇಕು ಎಂದು ತಿಳಿಸಿದರು.
ಯಾವುದೇ ಸಮಸ್ಯೆಗಳು ಕಂಡು ಬಂದ ತಕ್ಷಣವೇ ವೈದ್ಯರಿಂದ ತಪಾಸಣೆ ಮಾಡಿಸಿಕೊಂಡರೆ ಹಲವು ಸಮಸ್ಯೆಗಳನ್ನು ನಿವಾರಿಸಬಹುದು. ಆದ್ದರಿಂದ ಯಾವುದೇ ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷಿಸಬಾರದು ಎಂದು ಸಲಹೆ ನೀಡಿದರು.
ಆಸ್ಪತ್ರೆ ಅಧಿಕಾರಿ ಪ್ರಮೋದ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net