ಮಣಿಪಾಲ್ ಆಸ್ಪತ್ರೆಯಲ್ಲಿ ‘ಮಣಿಪಾಲ್ ಸಖಿ’ ವಿಶೇಷ ವೇದಿಕೆ ಆರಂಭ

Manipal
Published on

ಮೈಸೂರು: ಮಹಿಳೆಯರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ನಗರದ ಮಣಿಪಾಲ್ ಆಸ್ಪತ್ರೆಯು ‘ಮಣಿಪಾಲ್ ಸಖಿ’ ಎಂಬ ವಿಶೇಷ ವೇದಿಕೆ ಆರಂಭಿಸಿದೆ. ಇದರ ಅಂಗವಾಗಿ ಆಸ್ಪತ್ರೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಹಿಳೆಯರು ತಾವು ಎದರಿಸಿದ ಆರೋಗ್ಯ ಸಮಸ್ಯೆ ತಿಳಿಸಿ ಇತರರಿಗೆ ಮಾರ್ಗದರ್ಶನ ನೀಡುವ ಮಾತುಗಳನ್ನಾಡಿದರು.

ಈ ವೇಳೆ ಆಸ್ಪತ್ರೆಯ ಪ್ರಸೂತಿ ವಿಭಾಗದ ಸಲಹೆಗಾರರಾದ ಡಾ.ಕೆ.ಜಿ. ಅಮೂಲ್ಯ ಮಾತನಾಡಿ, ಕುಟುಂಬದ ಇತರರ ಕಾಳಜಿ ಮಹಿಳೆ ವಹಿಸುತ್ತಾಳೆ, ಆದರೆ ಆಕೆ ತನ್ನ ಆರೋಗ್ಯ ನಿರ್ಲಕ್ಷಿಸುತ್ತಿದ್ದಾಳೆ. ಹೀಗಾಗಿ ಮಹಿಳೆಯರ ಆರೋಗ್ಯ ವಿಷಯಕ್ಕೆ ಸಂಬಂಧಿಸಿದಂತೆ ಅರಿವು ಮೂಡಿಸುವುದು ಈ ವೇದಿಕೆ ಉದ್ದೇಶವಾಗಿದೆ ಎಂದು ವಿವರಿಸಿದರು.

ಹೃದ್ರೋಗ ತಜ್ಞೆ ಡಾ. ಶಶಿರೇಖಾ ಸಂವಾದದಲ್ಲಿ ಪಾಲ್ಗೊಂಡಿದ್ದವರ ಪ್ರಶ್ನೆಗೆ ಉತ್ತರಿಸಿ, ಎಲ್ಲ ಹೃದಯ ಸಂಬಂಧಿ ಭಿತ್ತಿಚಿತ್ರಗಳಲ್ಲಿ ಹೃದಯಾಘಾತಕ್ಕೆ ಸಂಬಂಧಿಸಿದ ಚಿತ್ರಗಳು ಇರುತ್ತವೆ. ಆದರೆ ಈ ವೇಳೆ ಮಹಿಳೆಯರನ್ನು ನಿರ್ಲಕ್ಷಿಸಲಾಗುತ್ತದೆ. ಅಂದರೆ ಮಹಿಳೆಯರಿಗೆ ಹೃದಯಾಘಾತ ಆಗುವುದಿಲ್ಲವೇ ಎಂಬ ಪ್ರಶ್ನೆ ಬರುತ್ತದೆ. ಹೀಗಾಗಿ ಮಹಿಳೆಯರಿಗೂ ಈ ಕುರಿತು ಅನಾರೋಗ್ಯ ಲಕ್ಷಣದ ಬಗ್ಗೆ ಮಾಹಿತಿ ನೀಡಬೇಕಾದ ಅಗತ್ಯವಿದೆ. ಜತೆಗೆ, ಪ್ರಾಥಮಿಕ ಲಕ್ಷಣಗಳನ್ನು ಮೊದಲೇ ಗಮನಿಸಿ ಚಿಕಿತ್ಸೆ ಪಡೆಯಲು ನೆರವಾಗಬೇಕಾದ ಅಗತ್ಯವಿದೆ ಎಂದು ಮಾಹಿತಿ ನೀಡಿದರು.

ಆಸ್ಪತ್ರೆಯು ಗರ್ಭಿಣಿಯರಿಗಾಗಿ 24 ್ಡ 7 ಅವಧಿಯ ಹಾಟ್‌ಲೈನ್ ಸಂಖ್ಯೆಯಾದ +91 96201 89896 ಅನ್ನು ಪ್ರಾರಂಭಿಸಿದ್ದು, ಅಗತ್ಯವುಳ್ಳವರು ಈ ಮೂಲಕ ಆಸ್ಪತ್ರೆ ತಜ್ಞರನ್ನು ಸಂಪರ್ಕಿಸಿ ನೆರವು ಪಡೆಯಬಹುದು ಎಂದರು. ಆಸ್ಪತ್ರೆಯ ನಿರ್ದೇಶಕ ಪ್ರಮೋದ್ ಕುಂದರ್, ತಜ್ಞ ವೈದ್ಯರಾದ ಡಾ. ನಿವೇದಿತಾ ಶೆಟ್ಟಿ, ಡಾ. ಗಿರಿಪುಂಜ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net