ಮಡಿವಾಳೇಶ್ವರ ರಥೋತ್ಸವ

11 UPBR 1a
Published on

ಕಲ್ಲೂರ/ ಉಪ್ಪಿನಬೆಟಗೇರಿ: ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ ವೈರಾಗ್ಯ ಚಕ್ರವರ್ತಿ ಲಿಂ. ಶ್ರೀ ಜಗದ್ಗುರು ಶ್ರೀ ಮಡಿವಾಳೇಶ್ವರ ಶಿವಯೋಗಿಗಳ 139ನೇ ಪುಣ್ಯಾರಾಧನೆ ನಿಮಿತ್ತ ಮಂಗಳವಾರ ಸಂಜೆ ರಥೋತ್ಸವ ಸಂಭ್ರಮದಿಂದ ನಡೆಯಿತು.

ಹರಗುರು ಚರಮೂರ್ತಿಗಳ ಸಮ್ಮುಖದಲ್ಲಿ ಮಡಿವಾಳೇಶ್ವರ ಮೂಲ ಗದ್ದುಗೆಯಿಂದ ಪಾದಗಟ್ಟೆಯ ವರೆಗೆ ಭಕ್ತರು ರಥವನ್ನು ಎಳೆದುಕೊಂಡು ಹೋಗಿ ಮರಳಿ ಮೂಲ ಗದ್ದುಗೆಗೆ ತಂದರು. ಗ್ರಾಮ ಸೇರಿ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಭಜನಾ ಮಂಡಳಿಗಳು, ಝಾಂಜ್ ಪಥಕ್, ಜಗ್ಗಲಗಿ ಮೇಳ, ಹೆಜ್ಜೆ ಮಜಲು, ಕರಡಿ ಮಜಲು, ಬ್ಯಾಂಡ್ ಮತ್ತಿತರ ಕಲಾ ತಂಡಗಳು ರಥೋತ್ಸವಕ್ಕೆ ಮೆರುಗು ನೀಡಿದವು.

ಧಾರವಾಡ ಜಿಲ್ಲೆಯಲ್ಲಿಯೇ ಅತೀ ದೊಡ್ಡ ಜಾತ್ರೆ ಇದಾಗಿದ್ದು, ರಾಜ್ಯ ಹಾಗೂ ಹೊರ ರಾಜ್ಯದ ಲಕ್ಷಾಂತರ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ಶ್ರೀ ಮಡಿವಾಳ ಶಿವಯೋಗಿಗಳ ಗದ್ದುಗೆ, ರಥದ ದರ್ಶನ ಪಡೆದರು. ಶ್ರೀ ಮಡಿವಾಳೇಶ್ವರ ಮಠದ ಶ್ರೀ ಚನ್ನಬಸವ ಸ್ವಾಮೀಜಿ, ಉಪ್ಪಿನಬೆಟಗೇರಿ ವಿರಕ್ತಮಠದ ಕುಮಾರ ವಿರೂಪಾಕ್ಷ ಸ್ವಾಮೀಜಿ, ವಿವಿಧ ಮಠಾಧೀಶರು, ಶಾಸಕ ಅಮೃತ ದೇಸಾಯಿ, ಅಶೋಕ ದೇಸಾಯಿ, ಜಿಪಂ ಸದಸ್ಯೆ ರತ್ನಾ ಪಾಟೀಲ, ಗ್ರಾಪಂ ಅಧ್ಯಕ್ಷ ಯಲ್ಲಪ್ಪ ಬೋರಿಮನಿ, ಇತರರು ಇದ್ದರು.

ಜಾತ್ರೆ ನಿಮಿತ್ತ ಬೆಳಗ್ಗೆ 4 ಗಂಟೆಗೆ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ವಿಶೇಷ ಪೂಜೆ ಜರುಗಿತು. ಭಕ್ತರಿಗೆ ಗರಗದ ಮಡಿವಾಳೇಶ್ವರ ಟ್ರಸ್ಟ್ ಕಮಿಟಿಯಿಂದ ಅನ್ನ ದಾಸೋಹ ಏರ್ಪಡಿಸಲಾಗಿತ್ತು. ಮುಂಜಾಗ್ರತೆ ಕ್ರಮವಾಗಿ ಗ್ರಾಮದ ವಿವಿಧೆಡೆ ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net