ಮಡಿವಾಳ ಸಮುದಾಯವನ್ನು ಗೌರವಿಸಿ

5HSN2
Published on

ಹಾಸನ: ಶಿವಭಕ್ತರ ಸೇವೆಗೆ ಸದಾ ಸಿದ್ಧರಾಗಿರುತ್ತಿದ್ದ ಮಡಿವಾಳ ಸಮುದಾಯವನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದೇವರಾಜ್ ಹೇಳಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಡಿವಾಳ ಮಾಚಿದೇವ ಸಂಘದಿಂದ ಬುಧವಾರ ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಏರ್ಪಡಿಸಿದ್ದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

12ನೇ ಶತಮಾನದ ಶರಣ ಚಳವಳಿಯಲ್ಲಿ ಮಾಚಿದೇವರ ಕೊಡುಗೆ ಅನನ್ಯವಾದುದು. ಶಿವಭಕ್ತರಿಗೆ ಬಟ್ಟೆ ತೊಳೆಯುವ ಫರ್ಮಾನು ಹೊರಡಿಸಿದ ಸಮುದಾಯದವರು ಅಸ್ಪಶ್ಯತೆ ಆಚರಣೆಗೆ ವಿರೋಧ ವ್ಯಕ್ತಪಡಿಸಿದರು. ಭೂಮಿ ಮೇಲೆ ಬದುಕುವ ಎಲ್ಲರೂ ಸಮಾನರು. ವಿಶ್ವಗುರು ಬಸವಣ್ಣನವರ ಸಾಮಾಜಿಕ ಕ್ರಾಂತಿಗೆ ಬೆನ್ನೆಲುಬಾದ ಮಾಚಿದೇವರು ವಚನ ಸಾಹಿತ್ಯದ ಮೂಲಕ ಸಮಾಜ ಸುಧಾರಣೆಗೆ ಶ್ರಮಿಸಿದ್ದಾರೆ ಎಂದರು.

ಮಹನೀಯರು ಯಾವುದೇ ಒಂದು ಜಾತಿಗೆ ಸೀಮಿತಗೊಳ್ಳಬಾರದು. ಸಹನೆ, ತಾಳ್ಮೆ, ಸಂಯಮ, ಪ್ರಾಮಾಣಿಕತೆಯ ಅರಿವು ಮೂಡಿಸುವ ದಾರ್ಶನಿಕರನ್ನು ಎಲ್ಲ ಸಮುದಾಯವರು ಒಪ್ಪಿಕೊಳ್ಳಬೇಕು. ಅವರ ಆದರ್ಶ, ತತ್ವಗಳನ್ನು ಅರ್ಥೈಸಿಕೊಂಡು ಅನುಷ್ಠಾನಕ್ಕೆ ತಂದರೆ ಮಾತ್ರ ಸ್ವಸ್ಥ ಸಮಾಜ ನಿರ್ಮಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾಧಿಕಾರಿ ಆರ್. ಗಿರೀಶ್ ಮಾತನಾಡಿ, ಅಮೆರಿಕದಲ್ಲಿ ವ್ಯಕ್ತಿಗೆ ಹೆಚ್ಚು ಗೌರವ ಕೊಡುವುದಾಗಲಿ, ನಿಕೃಷ್ಟ ಎಂದು ಭಾವಿಸುವುದಾಗಲಿ ಮಾಡುವುದಿಲ್ಲ. ಆದರೆ, ಭಾರತದಲ್ಲಿ ಜಾತಿ, ಕಸುಬು ಆಧರಿಸಿ ಗೌರವ ನಿರ್ಧರಿಸಲಾಗುತ್ತದೆ. ಸರ್ವರೂ ಸಮಾನರು ಎಂಬ ಪರಿಕಲ್ಪನೆ ನಮ್ಮಲ್ಲಿ ಇನ್ನೂ ಮೂಡಬೇಕಿದೆ ಎಂದರು.
ವಿಜಯಪುರ ಜಿಲ್ಲೆ ದೇವರಹಿಪ್ಪರಗಿಯಲ್ಲಿ ಜನಿಸಿದ ಮಾಚಿದೇವರು ಬಾಲ್ಯದಿಂದಲೇ ಜಾತಿ ಪದ್ಧತಿ ಆಚರಣೆ ಜತೆಗೆ ಬೆಳೆದರು. ಇದರಿಂದ ಕುಪಿತಗೊಂಡ ಅವರು ಶರಣರ ಜತೆಗೂಡಿ ತಮ್ಮದೇಯಾದ ವಿಚಾರಗಳ ಮೂಲಕ ಸಮಾನತೆಗೆ ಶ್ರಮಿಸಿದರು ಎಂದರು.

ದೇವರಾಜ ಅರಸು ನಿಗಮದ ಅಧಿಕಾರಿ ಕೃಷ್ಣಕುಮಾರ್ ಮಾತನಾಡಿ, ದಿವಂಗತ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ರಾಜ್ಯದಲ್ಲಿ ಅಧಿಕಾರ ಹಿಡಿಯದಿದ್ದರೆ ಇಂದಿಗೂ ಹಿಂದುಳಿದ ವರ್ಗಗಳು ಸಂಕಷ್ಟ ಅನುಭವಿಸಬೇಕಿತ್ತು. ಈ ಕಾರಣಕ್ಕಾಗಿ ಆ ಮಹಾನ್ ವ್ಯಕ್ತಿಯನ್ನು ಸ್ಮರಿಸಬೇಕು ಎಂದರು.

ಜಿಲ್ಲೆಯಲ್ಲಿ ಮಡಿವಾಳ ಸಮುದಾಯದ ಶ್ರೇಯೋಭಿವೃದ್ಧಿಗೆ ಅನೇಕ ಯೋಜನೆ ರೂಪಿಸಲಾಗಿದೆ. ಗಂಗಾ ಕಲ್ಯಾಣ ಯೋಜನೆಯಡಿ 196 ರೈತರಿಗೆ 80.90 ಲಕ್ಷ ರೂ. ಸಾಲ ಸೌಲಭ್ಯ ಒದಗಿಸಲಾಗಿದೆ. 7.50 ಲಕ್ಷ ರೂ. ವೆಚ್ಚದಲ್ಲಿ ಸೋಪಾನ ಕಟ್ಟೆ ನಿರ್ಮಿಸಿಕೊಡಲಾಗಿದೆ. ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳಿಗೆ ನಾಲ್ಕು ವರ್ಷ ತಲಾ 1 ಲಕ್ಷ ರೂ.ನಂತೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದೆ ಎಂದು ತಿಳಿಸಿದರು.

ತಾಲೂಕು ಪಂಚಾಯಿತಿ ಅಧ್ಯಕ್ಷ ನಿಂಗೇಗೌಡ ಮಾತನಾಡಿದರು. ಗೊರೂರು ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಬಿ.ಎ. ಗೋವಿಂದರಾಜು ಉಪನ್ಯಾಸ ನೀಡಿದರು. ಜಿಲ್ಲಾಧಿಕಾರಿ ಕಚೇರಿಯಿಂದ ಹಾಸನಾಂಬ ಕಲಾಕ್ಷೇತ್ರದ ವರೆಗೆ ಮೆರವಣಿಗೆ ಏರ್ಪಡಿಸಲಾಗಿತ್ತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಶಿವಲಿಂಗಪ್ಪ ಎಸ್.ಕುಂಬಾರ್, ಮಡಿವಾಳ ಮಾಚಿದೇವ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ವಿಜಯಲಕ್ಷ್ಮೀ ಅಂಜನಪ್ಪ, ತಹಸೀಲ್ದಾರ್ ಶಿವಶಂಕರಪ್ಪ ಹಾಗೂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net