

ಮೈಸೂರು: ಮಡಿವಾಳ ಮಾಚಯ್ಯನವರ ಚಿಂತನೆ ಪ್ರಸ್ತುತ ಸಮಾಜಕ್ಕೂ ಅನ್ವಯವಾಗಲಿದೆ ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ.ಸಿ.ನಾಗಣ್ಣ ಹೇಳಿದರು.
ಮೈಸೂರು ವಿಶ್ವವಿದ್ಯಾಲಯದ ಶ್ರೀ ಬಸವೇಶ್ವರ ಸಾಮಾಜಿಕ ಪರಿಷ್ಕರಣೆ, ಸಂಶೋಧನೆ, ಅಧ್ಯಯನ ಹಾಗೂ ವಿಸ್ತರಣಾ ಕೇಂದ್ರ ಮತ್ತು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಹಯೋಗದಲ್ಲಿ ನಗರದ ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಮಡಿವಾಳ ಮಾಚಯ್ಯನವರ ಚಿಂತನೆ’ ಕುರಿತು ಉಪನ್ಯಾಸ ನೀಡಿದರು.
ಮಾಚಯ್ಯನವರು ಮಡಿವಾಳ ಕಾಯಕದೊಂದಿಗೆ ಶರಣ ತತ್ವವನ್ನು ಎತ್ತಿ ಹಿಡಿದರು. ಬದುಕಿನ ಉದ್ದಕ್ಕೂ ಗುರು ಮತ್ತು ಅರಿವನ್ನು ಬಲವಾಗಿ ನಂಬಿ, ಅನ್ಯಾಯವನ್ನು ಖಂಡಿಸುತ್ತಾ, ಭಕ್ತಿಯ ಮಾರ್ಗದಲ್ಲಿ ಬಲವಾಗಿ ನಡೆದು ವೀರನಿಷ್ಠೆಯ ಪ್ರತೀಕವಾಗಿದ್ದಾರೆ ಎಂದರು.
ಮಡಿವಾಳ ಮಾಚಯ್ಯನವರ ಕಾಯಕನಿಷ್ಠೆ ಇಂದಿನ ಸಮಾಜಕ್ಕೂ ಮಾದರಿಯಾಗಿದೆ. ಮನದ ಮಲಿನವನ್ನು ತೆಗೆದು ಶುದ್ಧಮನಸ್ಸಿನ ಭಕ್ತಿ ಬದುಕನ್ನು ಮಡಿವಾಳ ಮಾಚಯ್ಯನವರು ತಮ್ಮ ವಚನಗಳಲ್ಲಿ ಪ್ರತಿಪಾದಿಸಿದ್ದಾರೆ. ಬಸವಣ್ಣ, ಅಲ್ಲಮ ಮುಂತಾದ ಶರಣರು ತಮ್ಮ ವಚನಗಳಲ್ಲಿ ಮಡಿವಾಳ ಮಾಚಯ್ಯನವರನ್ನು ನೆನೆದು ಅವರಿಂದ ಭಕ್ತಿಯನ್ನು ಕಂಡುಕೊಂಡೆವು ಎಂಬ ಕೃತಜ್ಞತಾ ಭಾವವನ್ನು ಹೊಂದಿದ್ದಾರೆ ಎಂದರು.
ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ.ಸಾಂಬಶಿವಯ್ಯ ಮಾತನಾಡಿ, 12ನೇ ಶತಮಾನದ ವಚನ ಸಾಹಿತ್ಯ ಕರ್ನಾಟಕ ಸಂಸ್ಕೃತಿಯ ಹೆಮ್ಮೆಯ ಪ್ರತೀಕವಾಗಿದೆ. ಈ ಕಾಲಘಟ್ಟದಲ್ಲಿ ರಚನೆಯಾದ ವಚನ ಸಾಹಿತ್ಯಕ್ಕೆ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ಆರ್ಥಿಕವಾದ ಭಿನ್ನ ಭಿನ್ನ ಆಯಾಮಗಳಿವೆ. ಈ ಕಾಲಘಟ್ಟದ ವಿಶ್ವಸಾಹಿತ್ಯ ಮತ್ತು ಭಾರತೀಯ ಸಾಹಿತ್ಯದ ಚರಿತ್ರೆಯ ಪುಟಗಳನ್ನು ತಿರುವಿ ನೋಡಿದರೆ ಈ ಪ್ರಕಾರದ ಸಾಹಿತ್ಯ ಅಥವಾ ಚಿಂತನೆಗಳು ಎಲ್ಲಿಯೂ ಕಂಡುಬರುವುದಿಲ್ಲ ಎಂದು ಹೇಳಿದರು.
ಶ್ರೀ ಬಸವೇಶ್ವರ ಸಾಮಾಜಿಕ ಪರಿಷ್ಕರಣೆ, ಸಂಶೋಧನೆ, ಅಧ್ಯಯನ ಹಾಗೂ ವಿಸ್ತರಣಾ ಕೇಂದ್ರದ ಸಂದರ್ಶಕ ಪ್ರಾಧ್ಯಾಪಕ ಪ್ರೊ. ಅರವಿಂದ ಮಾಲಗತ್ತಿ ಮಾತನಾಡಿ, ಶರಣರ ಚಿಂತನೆಗಳು ವೇದಶಾಸ್ತ್ರ, ಪುರಾಣ, ಆಗಮಗಳಿಗೆ ಬಹಳವಾಗಿ ಮುಖಾಮುಖಿಯಾಗುತ್ತವೆ.
ಪರ-ವಿರೋಧದ ನಿಲುವುಗಳು ವಚನಗಳಲ್ಲಿ ಅಭಿವ್ಯಕ್ತಗೊಂಡಿದೆ. ಅವುಗಳನ್ನು ಪರಾಮರ್ಶಿಸುವ ಮತ್ತು ಯುವ ಸಮುದಾಯಕ್ಕೆ ತಲುಪಿಸುವ ನಿಟ್ಟಿನಲ್ಲಿ ಈ ಉಪನ್ಯಾಸ ಸರಣಿ ಮಹತ್ವ ಪಡೆದುಕೊಂಡಿದೆ ಎಂದರು. ಪ್ರಾಂಶುಪಾಲ ಡಾ.ಎಂ.ಪ್ರಭು, ಡಾ. ಬಿ.ಎಸ್. ಸುದೀಪ್, ಡಾ.ಎಚ್.ಆರ್. ಮಮತಾ ಇದ್ದರು.