

ಮೈಸೂರು: ಕರ್ನಾಟಕ ರಾಜ್ಯದಲ್ಲಿರುವ ಮಡಿವಾಳ ಜನಾಂಗವನ್ನು ಪರಿಶಿಷ್ಟ ಜಾತಿಗೆ (ಎಸ್‌ಸಿ)ಗೆ ಸೇರಿಸುವಂತೆ ಒತ್ತಾಯಿಸಿ ಜಿಲ್ಲಾ ಮಡಿವಾಳರ ಪರಿಶಿಷ್ಟ ಜಾತಿ ಹೋರಾಟ ಸಮಿತಿ ಸದಸ್ಯರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಒಂದು ದಿನದ ಸಾಂಕೇತಿಕ ಉಪವಾಸ ಸತ್ಯಾಗ್ರಹ ನಡೆಸಿದರು.
ನಾಲ್ಕು ದಶಕಗಳಿಂದ ಕರ್ನಾಟಕ ರಾಜ್ಯ ಮಡಿವಾಳ ಜನಾಂಗವನ್ನು ಪರಿಶಿಷ್ಟ ಜಾತಿಗೆ ಸೇರಿಸುವಂತೆ ಒತ್ತಾಯಿಸಿ ಹೋರಾಟ ಮಾಡುತ್ತಾ ಬಂದಿದ್ದು, ಹಿಂದಿನ ಸರ್ಕಾರವೇ ಮಡಿವಾಳ ಜನಾಂಗವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಮೈಸೂರಿನ ಪ್ರೊ.ಅನ್ನಪೂರ್ಣಮ್ಮನವರಿಂದ ಕುಲಶಾಸ್ತ್ರ ಅಧ್ಯಯನ ಮಾಡಿಸಿ ವರದಿ ತಯಾರಿಸಿದೆ. ಆದರೆ ಸರದಿ ವರದಿ ಇನ್ನು ರಾಜ್ಯ ಸರ್ಕಾರದ ಅಧೀನದಲ್ಲಿ ಇದ್ದು, ವರದಿಯನ್ನು ಸಚಿವರ ಸಂಪುಟದಲ್ಲಿ ಅನುಮೋದನೆ ಪಡೆದು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಸಮಿತಿಯ ಸಂಸ್ಥಾಪಕ ಎಸ್.ಪ್ರಶಾಂತ್, ಕಾರ್ಯದರ್ಶಿ ಜಗದೀಶ್, ಜಿಲ್ಲಾ ಮಡಿವಾಳರ ಸಂಘದ ಅಧ್ಯಕ್ಷ ಚಂದ್ರಶೇಖರ ಬೈರಿ, ಕಾರ್ಯಾಧ್ಯಕ್ಷ ಎಂ.ರಾಜು, ಚನ್ನಕೇಶವ ಸೇರಿದಂತೆ ಇತರರಿದ್ದರು.