

ಹಗರೆ: ಗುರುವಿನ ಋಣ ತೀರಿಸಬೇಕೆಂದಲ್ಲಿ ನಾವು ಶಿಕ್ಷಕರನ್ನು ಗೌರವಿಸಿ ಚಿರಋಣಿಯಾಗಿರಬೇಕೆಂದು ಹಾಲ್ತೋರೆ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜು ತಿಳಿಸಿದರು.
ಮಾದೀಹಳ್ಳಿ ಹೋಬಳಿ ಹಾಲ್ತೋರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಹತ್ತು ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಶಿಕ್ಷಕಿ ಗಿರಿಜಾಂಬ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು, ಕಳೆದ ಹತ್ತು ವರ್ಷಗಳಿಂದ ನಮ್ಮ ಗ್ರಾಮದ ಮನೆ ಮಗಳಂತೆ ಮಕ್ಕಳನ್ನು ಓದಿಸಿ ವಿಧ್ಯಾಭ್ಯಾಸ ಕಲಿಸಿ ಶಾಲೆಯ ಶ್ರೇಯೋಬಿವೃದ್ಧಿಗೆ ಮೂಲ ಕಾರಣರಾಗಿದ್ದಾರೆ. ಅವರಿಂದ ಶಿಕ್ಷಣ ಪಡೆದ ಹಲವಾರು ಮಕ್ಕಳು ಇಂದು ದೊಡ್ಡ ಹುದ್ದೆಯಲ್ಲೂ ಇದ್ದಾರೆ ಎಂದು ಹೇಳಲು ಹೆಮ್ಮೆಯನಿಸುತ್ತದೆ ಎಂದರು.
ಹಗರೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶಿವರಾಜು ಮಾತನಾಡಿದರು.
ಶಿಕ್ಷಕಿ ಗಿರಿಜಾಂಬ ಅವರಿಗೆ ಗ್ರಾಮಸ್ಥರ ಪರವಾಗಿ ನಾಗರತ್ನ, ಭಾಗ್ಯ ಸೀರೆ, ರವಿಕೆ ಕಣದೊಂದಿಗೆ ಮಡಿಲಕ್ಕಿ ತುಂಬಿ ಗೌರವಿಸಿದರು. ಪುಟಾಣಿ ಮಕ್ಕಳು ವಿವಿಧ ಬಗೆಯ ಉಡುಗೊರೆ ನೀಡಿ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು.
ಗ್ರಾಮದ ಮುಖಂಡ ರಾಮಕೃಷ್ಣೆಗೌಡ, ಹುಲುಗುಂಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಲ್ಲೇಶ್, ಸಮಾಜ ಸೇವಕಿ ಅನ್ನಪೂರ್ಣ, ಹಗರೆ ಗೊಬ್ಬರ ವ್ಯಾಪಾರಿ ಮಂಜೇಗೌಡ, ಮೋಹನ್, ಗ್ರಾಮಸ್ಥರಾದ ಕೆಂಪೇಗೌಡ, ರಾಮೇಗೌಡ, ಪ್ರದೀಪ್, ಗೌರಮ್ಮ, ಲಕ್ಷ್ಮಮ್ಮ ಇನ್ನಿತರರಿದ್ದರು.