ಮಡಿಕೇರಿಯ ಫೀ.ಮಾ.ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ಕನ್ನಡ ಸಂಘದ ಉದ್ಘಾಟನೆ

1mdk5
Published on

ಮಡಿಕೇರಿ: ವಿದ್ಯಾರ್ಥಿಗಳು ಮೊಬೈಲ್ ಬಳಕೆಯಿಂದ ದೂರ ಉಳಿದು ಪುಸ್ತಕ ಓದುವ ಹವ್ಯಾಸವನ್ನು ರೂಢಿಸಿಕೊಳ್ಳುವ ಮೂಲಕ ಕನ್ನಡ ಸಾಹಿತ್ಯ ಜಗತ್ತನ್ನು ಬೆಳಗಿಸಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಅಭಿಪ್ರಾಯಪಟ್ಟರು.


ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಕನ್ನಡ ವಿಭಾಗ ಆಯೋಜಿಸಿದ ಅಕ್ಷರ ಬಿತ್ತಿ ಗೋಡೆ ಪತ್ರಿಕೆಯ ಬಿಡುಗಡೆ ಹಾಗೂ ನನ್ನ ನೆಚ್ಚಿನ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ವಿಶೇಷ ಉಪನ್ಯಾಸ ನೀಡಿದರು.


ಕನ್ನಡ ಸಂಘಗಳು ವಿದ್ಯಾರ್ಥಿಗಳಲ್ಲಿ ಸಾಹಿತ್ಯಕ ಮೌಲ್ಯಗಳನ್ನು ರೂಪಿಸಿ ಸಾಹಿತ್ಯ ಸೃಷ್ಟಿಗೆ ಪೂರಕ ವಾತಾವರಣವನ್ನು ನಿರ್ಮಿಸಬೇಕು. ಬರಹಗಾರರರಂತೆ ಓದುಗರ ಸಂಖ್ಯೆಯನ್ನು ಹೆಚ್ಚಿಸುವ ಪ್ರಯತ್ನಗಳು ನಡೆಯಬೇಕಿದೆ ಎಂದರು.


ಹಿರಿಯ ಪತ್ರಕರ್ತ ಕೆ.ಎಸ್.ಗಿರೀಶ ಅಕ್ಷರ ಬಿತ್ತಿ ವಿದ್ಯಾರ್ಥಿ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಬರವಣಿಗೆಯ ಸಾಧ್ಯತೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಮೇಜರ್ ಪ್ರೊ. ರಾಘವ ಬಿ ವಹಿಸಿ ಮಾತನಾಡಿ, ಕನ್ನಡ ವಿಭಾಗ ಹೀಗೆ ನಿರಂತರ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು. ಸಂಸ್ಕೃತಿಯ ಮೂಲಧಾತುವಾಗಿ ಭಾಷೆಯನ್ನು ಪರಿಭಾವಿಸಬೇಕು. ಮನೆ, ಮಾತೃವೇ ಮೊದಲ ಪಾಠ ಶಾಲೆಯಾಗಿ ವಿದ್ಯಾರ್ಥಿಗಳಲ್ಲಿ ಭಾಷಿಕ ಸಂರಚನೆಯನ್ನು ಸ್ಪಚ್ಚಗೊಳ್ಳುವಂತೆ ಮಾಡಬೇಕು ಎಂದು ಅಭಿಪ್ರಾಯಪಟ್ಟರು.


ಕನ್ನಡ ಸಂಘದ ಸಂಚಾಲಕ ಎಚ್.ಡಿ.ಮುಖೇಶ್, ಡಾ.ಎನ್.ವಿ.ಕರುಣಾಕರ, ಡಾ.ಕೆ.ಎಚ್.ಮುಸ್ತಾಫ, ಡಾ.ವಿನೋದ್, ಡಾ.ಮಹಾಲಕ್ಷ್ಮಿ, ಕನ್ನಡ ವಿಭಾಗದ ಸಂಯೋಜಕ ಪ್ರೊ.ತಿಪ್ಪೇಸ್ವಾಮಿ ಈ ಮತ್ತು ಐಕ್ಯೂಎಸಿ ಸಂಯೋಜಕ ಡಾ.ಆರ್.ರಾಜೇಂದ್ರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net